ಪುತ್ತೂರು, ಸೆ 16: ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಹೊಂಡಗುಂಡಿಗಳ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ಆರಂಭಗೊಂಡಿದೆ. ನಗರಸಭೆಯ ಬಿಜೆಪಿ ಆಡಳಿತ ಮಂಡಳಿ 41.3 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಡಾಂಬರು ಪ್ಯಾಚ್ ವರ್ಕ್ ಕಾಮಗಾರಿಗೆ ಅನುಮೋದನೆ ನೀಡಿ, ಇ-ಟೆಂಡರ್ ಕರೆದಿದ್ದರೂ, ಶಾಸಕರು ತಮ್ಮ ಆಪ್ತ ಗುತ್ತಿಗೆದಾರರಿಗೆ ಕಾಮಗಾರಿ ನೀಡುವಂತೆ ಪೌರಾಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸುಂದರ ಪೂಜಾರಿ, ಶಾಸಕರ ವಿರುದ್ಧ ಹರಿಹಾಯ್ದರು. “ಕಾನೂನು ಪ್ರಕಾರ ಇಂತಹ ಕಾಮಗಾರಿಯನ್ನು ಟೆಂಡರ್ ಕರೆದು ಕೊಡಬೇಕಾಗುತ್ತದೆ. ತಮಗೆ ಬೇಕಾದವರಿಗೆ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಿಂದ ಶಾಸಕರಿಗೆ ಕಾನೂನಿನ ಅರಿವಿಲ್ಲದಿರುವುದು ಸ್ಪಷ್ಟವಾಗುತ್ತದೆ. ಶಾಸಕರು ಹೇಳಿದವರಿಗೆ ಕಾಮಗಾರಿ ಕೊಡಲು ಇದು ಶಾಸಕರ ಸ್ವಂತ ದುಡ್ಡಿನಿಂದ ಮಾಡುವ ಕೆಲಸವಾ?” ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತ ಮಂಡಳಿ ಮಂಜೂರು ಮಾಡಿದ ಕಾಮಗಾರಿಯ ಬಗ್ಗೆ ಶಾಸಕರು ಮೂಗು ತೂರಿಸುವ ಅವಶ್ಯಕತೆ ಏನು? ಅಷ್ಟು ಕಾಳಜಿ ಇದ್ದರೆ, ರಾಜ್ಯ ಸರ್ಕಾರದ 2000 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಹೇಳಿದ್ದೀರಲ್ಲ, ಆ ದುಡ್ಡಿನಲ್ಲಿ ರಸ್ತೆ ದುರಸ್ತಿ ಮಾಡಬೇಕಿತ್ತು. ಅಥವಾ ಆ ಅನುದಾನದಲ್ಲಿ ಪುತ್ತೂರು ಪೇಟೆಯ ಪ್ರಮುಖ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಬಹುದಿತ್ತು. ಇದರಿಂದ ವರ್ಷಂಪ್ರತಿ ಡಾಂಬರು ಹಾಕುವ ಕೆಲಸ ತಪ್ಪುತ್ತಿತ್ತು ಮತ್ತು ಲಕ್ಷಾಂತರ ರೂಪಾಯಿ ಹಣ ಉಳಿಯುತ್ತಿತ್ತು ಎಂದು ಪೂಜಾರಿ ಶಾಸಕರಿಗೆ ತಿರುಗೇಟು ನೀಡಿದರು.
ಶಾಸಕರು ಪ್ರಚಾರ ಪಡೆಯುವ ಧಾವಂತದಲ್ಲಿದ್ದಾರೆ. ಯಾರೇ ಕಾಮಗಾರಿ ನಡೆಸಲಿ, ಅದನ್ನು ನಾನೇ ಮಾಡಿಸಿದ್ದು ಎಂದು ಪೋಸ್ ಕೊಡುವುದು ಅವರ ಚಾಳಿಯಾಗಿದೆ ಎಂದು ಪೂಜಾರಿ ವ್ಯಂಗ್ಯವಾಡಿದರು.
“ಶಾಸಕರು ಮುನ್ಸಿಪಲ್ ಕಮಿಷನರ್ಗೆ ಫೋನ್ ಮಾಡಿ ಬೈದರಲ್ಲ, ಹಿಂದಿನ ಪ್ರಾಮಾಣಿಕ ಕಮಿಷನರ್ ಮಧು ಮನೋಹರ್ ರವರನ್ನು ವರ್ಗಾಯಿಸಿ ಈಗಿನ ಕಮಿಷನರನ್ನು ಇವರೇ ತಂದದ್ದು. ಈಗ ಯಾಕೆ ಬಯ್ಯುತ್ತೀರಿ? ಪ್ರಚಾರಕ್ಕಾ? ಹಾಗಿದ್ದರೆ ಹಿಂದಿನ ಕಮಿಷನರನ್ನು ವರ್ಗಾಯಿಸಲು ಕಾರಣವೇನು ಎಂದು ಹೇಳಬೇಕಲ್ಲ?” ಎಂದು ಪೂಜಾರಿ ಪ್ರಶ್ನಿಸಿದರು.
“ಶಾಸಕರ ಅವಧಿಯಲ್ಲಿ ರಾಜ್ಯ ಸರ್ಕಾರದ 2000 ಕೋಟಿ ಬಿಡಿ, ಒಂದು ಚಿಕ್ಕಾಸು ಅನುದಾನ ಬಂದಿಲ್ಲ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಕು. ಇವರು ಬೈದು ಒತ್ತಡ ಹಾಕಿ ರಾಧಣ್ಣರವರಲ್ಲಿ ಡಾಂಬರು ಪ್ಯಾಚ್ ವರ್ಕ್ ಕಾಮಗಾರಿ ಮಾಡಿಸಿದರಲ್ಲ, ಇನ್ನೂ ಇದರ ಟೆಂಡರ್ ಓಪನ್ ಆಗಿಲ್ಲ. ಇದರ ಟೆಂಡರ್ ಬೇರೆಯವರಿಗೆ ಆದರೆ ಏನು ಮಾಡುತ್ತೀರಿ ಶಾಸಕರೇ?” ಎಂದು ಪೂಜಾರಿ ಸವಾಲು ಹಾಕಿದರು.
“ನಗರಸಭೆಯ ಆಡಳಿತಾಧಿಕಾರಿ ಜಿಲ್ಲಾಧಿಕಾರಿ ಹೊರತು ನೀವಲ್ಲ. ಟೆಂಡರ್ ಆಗುವ ಮೊದಲೇ ಕಾಮಗಾರಿಗೆ ಪ್ರಾರಂಭಿಸಿರುವುದು ದೊಡ್ಡ ಅಪರಾಧ. ಹೀಗಿದ್ದರೂ ಜಿಲ್ಲಾಧಿಕಾರಿ ಇದರ ಬಿಲ್ ನೀಡುತ್ತಾರೆಯೇ? ಕಣ್ಣು ಮುಚ್ಚಿ ಬಿಲ್ ನೀಡಲು ಅವರೇನು ನಿಮ್ಮ ಚೇಲಾ ಅಧಿಕಾರಿಯಾ? ಅವರೊಬ್ಬ ಪ್ರಾಮಾಣಿಕ IAS ಅಧಿಕಾರಿ ಎಂದು ಜಿಲ್ಲಾಧಿಕಾರಿಯ ಪರವಾಗಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಶಶಿಧರ ನಾಯಕ್, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.























