ಕಾಳುಮೆಣಸು ಧಾರಣೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಗಗನಮುಖಿಯಾಗುತ್ತಿದೆ. ಕಳೆದ 10 ದಿನಗಳಲ್ಲಿ ಪ್ರತಿ ಕೆಜಿ ಗಾರ್ಬಲ್ಡ್ ಕಾಳುಮೆಣಸು ಧಾರಣೆ 16 ರೂ. ಹೆಚ್ಚಿದೆ. ಸೋಮವಾರ ಪ್ರತಿ ಕೆಜಿ ಗಾರ್ಬಲ್ಡ್ ಕಾಳುಮೆಣಸು ದರ 588 ರೂ. ಹಾಗೂ ಅನ್ ಗಾರ್ಬಲ್ಡ್ ದರ 568 ರೂ.ಗೆ ತಲುಪಿದೆ.
ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ದೇಶದಲ್ಲಿ ಕಾಳುಮೆಣಸಿನ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೊಸ ಪೀಳಿಗೆಯ ಆಹಾರ ಖಾದ್ಯಗಳಲ್ಲಿ ಕಾಳುಮೆಣಸು ಪ್ರಮುಖ ಪಾತ್ರ ವಹಿಸಿದೆ. ಬೇಡಿಕೆ ಹೆಚ್ಚಿದರೂ ಉತ್ಪಾದನೆ ಕಡಿಮೆಯಾಗಿರುವುದು ಕಾರಣ ಕಾಳುಮೆಣಸಿನ ಬೆಲೆ ಹೆಚ್ಚಾಗಿದೆ.
ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚದ ಕಾರಣ ಭಾರತದ ಆಮದನ್ನೇ ಹೆಚ್ಚಾಗಿ ಅವಲಂಬಿಸುವಂತಾಗಿದೆ. ಭಾರತ ಈಗ ವಿಯೆಟ್ನಾಂನಿಂದ ಕಾಳುಮೆಣಸನ್ನು ಆಮದು ಮಾಡಿಕೊಳ್ಳುವ ಎರಡನೇ ಅತಿ ದೊಡ್ಡ ದೇಶವಾಗಿದೆ. ಅಮೆರಿಕ ಆಮದಿನಲ್ಲಿ ಮೊದಲ ಸ್ಥಾನದಲ್ಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್ ಭಾರತದ ಕಾಳುಮೆಣಸಿಗೆ 7,250 ಡಾಲರ್ ಇದೆ. ವಿಯೆಟ್ನಾಂ ಕಾಳುಮೆಣಸಿಗೆ 4,600 ಡಾಲರ್, ಬ್ರೆಜಿಲ್ ಕಾಳುಮೆಣಸಿಗೆ 4,300 ಡಾಲರ್ ಮತ್ತು ಶ್ರೀಲಂಕಾದ ಕಾಳುಮೆಣಸಿಗೆ 6,200 ಡಾಲರ್, ಇಂಡೋನೇಷ್ಯಾದ ಕಾಳುಮೆಣಸಿಗೆ 5,000 ಡಾಲರ್ ಬೆಲೆ ಇದೆ.
ದೇಶದ ಮಸಾಲೆ ಕಂಪನಿಗಳಿಗೆ ಹೆಚ್ಚಿನ ಕಾಳುಮೆಣಸು ಅಗತ್ಯವಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಕಾಳುಮೆಣಸು ಲಭ್ಯವಿಲ್ಲ. ಹೀಗಾಗಿ ಈ ಕಂಪನಿಗಳು ಕಾಳುಮೆಣಸನ್ನು ಆಮದು ಮಾಡಿಕೊಳ್ಳುತ್ತಿವೆ. ಇದರಿಂದ ಕಾಳುಮೆಣಸಿನ ಆಮದು ಹೆಚ್ಚಿದೆ.
ಬಿಸಿಲಿನ ಬೇಗೆಗೆ ಕಾಳುಮೆಣಸಿನ ಬಳ್ಳಿ ಒಣಗುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ. ಪ್ರಸ್ತುತ ಕರ್ನಾಟಕ ಮತ್ತು ತಮಿಳುನಾಡಿನ ಕಾಳುಮೆಣಸು ಹೆಚ್ಚಾಗಿ ಮಾರುಕಟ್ಟೆ ತಲುಪುತ್ತಿದೆ.
ಕಾಳುಮೆಣಸು ದರ ಹೆಚ್ಚುತ್ತಿದ್ದರೂ, ಬೆಲೆ ಏರಿಕೆ ನಿರೀಕ್ಷೆಯಲ್ಲಿ ಬೆಳೆಗಾರರು ಮಾರಾಟಕ್ಕೆ ಮುಂದಾಗುತ್ತಿಲ್ಲ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿಲ್ಲ