ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 5 ತಿಂಗಳ ಬಳಿಕ ಜೋರು ಮಳೆಯಾಗಿದೆ. ಈ ಮೂಲಕ ಬಿಸಿಯ ಬೇಗೆಯಿಂದ ಬೆಂದಿದ್ದ ಜನರಿಗೆ ತಂಪನೆಯ ವಾತಾವರಣ ಸಮಾಧಾನ ತರಿಸಿದೆ.
ಬೆಳಿಗ್ಗೆಯಿಂದ ಜೋರು ಬಿಸಲು ಮುಂದುವರೆದಿತ್ತು. ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆಯು ತುಸು ಕಾಲ ಜೋರಾಗಿ ಸುರಿಯಿತು. ಆ ಬಳಿಕ ಮಂದವಾಗಿ ಜಿನುಗುತ್ತಿದೆ. ಸಂಜೆ ಕೆಲಸದ ಬಳಿಕ ಮನೆಗೆ ತೆರಳುತ್ತಿದ್ದವರು ಮಳೆಯಲ್ಲಿ ಸಲುಕಿಕೊಂಡರು ಕೂಡ ಬಹಳ ದಿನದ ಬಳಿಕ ಬಂದ ಮಳೆ ಕಂಡು ಖುಷಿಯಾದರು.
ಮಳೆಯಿಂದ ನಗರದ ಹಲವೆಡೆ ಮರಗಳು ಧರೆಗೆ ಉರುಳಿವೆ. ಹನುಮಂತನಗರ ಪಾರ್ಕ್ ಬಳಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರ್ ಮೇಲೆಯೇ ಮರ ಕುಸಿದುಬಿದ್ದಿದ್ದು, ಕಾರು ನುಜ್ಜುಗುಜ್ಜಾಗಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಉಷ್ಣಾಂಶ ದಾಖಲೆಯ ಮಟ್ಟ ತಲುಪಿದೆ. ಬುಧವಾರ ನಗರದ ಕೆಲ ಪ್ರದೇಶಗಳಲ್ಲಿ 40 ಸೆಲ್ಸಿಯಸ್ ಡಿಗ್ರಿ ತಾಪಮಾನ ದಾಖಲಾಗಿದೆ. ಏಪ್ರಿಲ್ 28ರ ಭಾನುವಾರ 38.5 ಡಿಗ್ರಿ ಸೆಲ್ಸಿಯಸ್, ಏ.27ರಂದು 38 ಡಿಗ್ರಿ ಸೆಲ್ಸಿಯಸ್ ಸೇರಿದಂತೆ ಒಟ್ಟು ಮೂರು ಬಾರಿ 38 ಡಿಗ್ರಿ ಸೆಲ್ಸಿಯಸ್ ಹಾಗೂ ಅದಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಹಲವು ದಿನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲು ವರದಿಯಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯಾದರೂ ತಾಪಮಾನ ಏನು ತಗ್ಗುವುದಿಲ್ಲ. ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ನಲ್ಲಿಯೇ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.