ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇಡಿಯಾಪು ಎಂಬಲ್ಲಿ ಜ.18ರಂದು ನಡೆದ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆಗೆ ರಿಕ್ಷಾದಲ್ಲಿಯೇ ಬರುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಗಮನ ಸೆಳೆದಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಸೇಡಿಯಾಪು ಎಂಬಲ್ಲಿ ನೂತನವಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ 5 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾದ ರಿಕ್ಷಾ ತಂಗು ದಾಣವನ್ನು ಉದ್ಘಾಟಿಸಲು ಸ್ವತಃ ರಿಕ್ಷಾದಲ್ಲಿ ಆಗಮಿಸಿ ಅಶೋಕ್ ಕುಮಾರ್ ರೈ ಮಾದರಿಯಾದರು. ವಿನಾಯಕನಗರದಲ್ಲಿರುವ ಮಠಂತಬೆಟ್ಟು ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ದ್ವಾರ ದಿಂದ ಸುಮಾರು 25 ರಿಕ್ಷಾಗಳೊಂದಿಗೆ ಬ್ಯಾಂಡ್, ವಾದ್ಯಗಳ ಮೂಲಕ ಶಾಸಕರನ್ನು ರಿಕ್ಷಾದಲ್ಲಿ ಕರೆದುಕೊಂಡು ಬರಲಾಯಿತು. ಬಳಿಕ ರಿಕ್ಷಾ ತಂಗುದಾಣವನ್ನು ಶಾಸಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಪ್ರಮುಖರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಎ. ಮುರಳೀಧರ ರೈ ಮಠಂತಬೆಟ್ಟು, ನಿರಂಜನ ರೈ ಮಠಂತಬೆಟ್ಟು, ವಿಕ್ರಂ ಅಂತರ, ಮೋನಪ್ಪ ಗೌಡ ಪಮ್ಮನಮಜಲು, ಡೆನ್ನಿಸ್ ಮಸ್ಕರೇನಸ್, ಯತೀಶ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಲೋಕೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉದ್ಘಾಟನೆ ನೆರವೇರಿಸಿದ ಬಳಿಕ
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಅವರ ಬೇಡಿಕೆಯಂತೆ ದಾರಂದಕುಕ್ಕು ಅಂಗನವಾಡಿ ಬಳಿ ಎಂಬಲ್ಲಿ ಮಕ್ಕಳ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ನೀಡುವುದಾಗಿ ತಿಳಿಸಿದರು.
ಸೇಡಿಯಾಪು ಜಂಕ್ಷನ್ ಬಳಿ ಹೆಬ್ಬಾವುನ ಲೋಗೋವನ್ನು ಅನಾವರಣಗೊಳಿಸಲಾಗುವುದು ಮತ್ತು ಮೆಡಿಕಲ್ ಕಾಲೇಜುವರೆಗೆ ಫೋರ್ ಲೈನ್ ಟ್ರ್ಯಾಕ್ ಮಾಡಲಾಗುವುದು, ಸೇಡಿಯಾಪುನಲ್ಲಿ ಪುತ್ತೂರು ಮೆಡಿಕಲ್ ಕಾಲೇಜಿನ ಪಿಮ್ಸ್ ದ್ವಾರ ನಿರ್ಮಿಸಲಾಗುವುದು ಮತ್ತು ಜಯಪ್ರಕಾಶ್ ಹೇಳಿದ ಬೇಡಿಕೆ ಕಜೆ – ಬೆಳ್ಳಿಪ್ಪಾಡಿ ರಸ್ತೆಯನ್ನು ಪ್ರಗತಿಪರ ಪ್ರಗತಿಪತ ರಸ್ತೆ ಯೋಜನೆ ಯಲ್ಲಿ ಅಭಿವೃದ್ಧಿ ಮಾಡಲಾಗುವುದು ಮತ್ತು ಸದ್ಯಕ್ಕೆ ಪ್ಯಾಚ್ ವರ್ಕ್ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಸುಧಾಕರ್ ಮತ್ತು ರಾಘವೇಂದ್ರ ಆಚಾರ್ಯ, ಗುತ್ತಿಗೆದಾರರಾದ ಫಾರೂಕ್ ಬಾಯಬೆ ಅವರನ್ನು ಶಾಲು ಹಾಕಿ ಶಾಸಕರು ಸನ್ಮಾನಿಸಿದರು.


























