ಪುತ್ತೂರು: ಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ ಪುತ್ತೂರು ವಿದ್ಯಾರ್ಥಿನಿಗೆ ಲೈಂಗಿಕ ಕಿತುಕುಳ ನೀಡಿದ ಆರೋಪ ಎದುರಿಸುತ್ತಿರುವ ಪುತ್ತೂರು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಎಲಿಯಾಸ್ ಪಿಂಟೋ, ತಂದೆ: ದಿ।। ಆಂಟೋನಿ ಪಿಂಟೋ, ಪ್ರಾಯ 55 ವರ್ಷ, ಏಂಜಲ್ಸ್ ಮನೆ, ಎಸ್.ಎಮ್. ಐ.ಟಿ.ಐ ಕಾಲೇಜು ಹತ್ತಿರ, ಕೊಂಬೆಟ್ಟು, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಇವರು ದಿನಾಂಕ:23.10.2021 ರಂದು ಪುತ್ತೂರಿನ ಕಾಲೇಜೊಂದರ ದೈಹಿಕ ಶಿಕ್ಷಕನಾಗಿದ್ದು ಅದೇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಸಂತ್ರಸ್ತೆ ಅಪ್ರಾಪ್ತ ಬಾಲಕಿಯು ಸ್ಪೋರ್ಟ್ಸ್ ಪ್ರಾಕ್ಟಿಸ್‌ಗೆ ಬಂದು ಒಂದು ರೌಂಡ್ ಓಡಿ ಜಿಮ್ ಕೊಠಡಿಯ ವರಾಂಡದಲ್ಲಿ ನಿಂತುಕೊಂಡಿದ್ದ ಸಮಯ ಬಾಲಕಿಯಲ್ಲಿ ನೀನು ಯಾಕೆ ಪ್ರಾಕ್ಟಿಸ್‌ಗೆ ಹೋಗಿಲ್ಲಾ ಎಂದು ಕೇಳಿದಾಗ ಬಾಲಕಿಯು ನನಗೆ ಸೊಂಟ ನೋವು ಇದ್ದುದರಿಂದ ಪ್ರಾಕ್ಟಿಸ್ ಮಾಡುವುದಿಲ್ಲ ಎಂದು ಹೇಳಿದ್ದರು. ಆರೋಪಿ ಎಲಿಯಾಸ್ ಪಿಂಟೋ ಬಾಲಕಿಯನ್ನು ಮಾತನಾಡಿಸಿಕೊಂಡು ಕೊಠಡಿಗೆ ಕರೆದುಕೊಂಡು ಹೋಗಿ ಬಾಲಕಿಯಲ್ಲಿ ಸೊಂಟ ನೋವು ಎಲ್ಲಿ ಆಗುತ್ತದೆ ಎಂದು ಕೇಳಿದ್ದು, ತಾನು ಮಸಾಜ್ ಮಾಡುವುದಾಗಿ ಹೇಳಿದ್ದು, ಬಾಲಕಿಯು ಪ್ರತಿರೋಧಿಸಿದರೂ ಒತ್ತಾಯಪಡಿಸಿ ಬಾಲಕಿಯನ್ನು ಕೊಠಡಿಯಲ್ಲಿನ ಕ್ಯಾಬಿನ್‌ಗೆ ಕರೆದುಕೊಂಡು ಹೋಗಿ ತನ್ನ ಕಾಮತೃಷೆಯನ್ನು ತೀರಿಸುವ ಉದ್ದೇಶದಿಂದ ಬಾಲಕಿಯ ಸೊಂಟವನ್ನು ಕೈಗಳಿಂದ ಒತ್ತಿ ಮಸಾಜ್ ಮಾಡಿ, ಪ್ಯಾಂಟ್ ಜಾರಿಸಿದಾಗ ಬಾಲಕಿಯು ಗಟ್ಟಿಯಾಗಿ ಹಿಡಿದುಕೊಂಡಿದ್ದು, ನಂತರ ಬಾಲಕಿಯು ಧರಿಸಿದ್ದ ಟೀ ಶರ್ಟ್‌ನ್ನು ಮೇಲೆತ್ತಿ ಹೊಟ್ಟೆಯನ್ನು ಅದುಮಿ, ಎದೆಭಾಗದವರೆಗೆ ಮೈಯನ್ನು ಮುಟ್ಟಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಬಾಲಕಿಗೆ ಮಾನಭಂಗವನ್ನುಂಟು ಮಾಡಿದ್ದಾರೆ.
ಬಾಲಕಿಯು ನೀಡಿದ ದೂರಿನ ಮೇರೆಗೆ ದ.ಕ. ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 19 ಸಾಕ್ಷಿಗಳನ್ನು ವಿಚಾರಿಸಿದೆ. ಬಾಲಕಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ಸವಿವರವಾದ ಹೇಳಿಕೆ ನೀಡಿರುತ್ತಾರೆ.
ದ.ಕ.ಮಹಿಳಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕರವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಗ್ಗೆ ವಿವರವಾದ ಸಾಕ್ಷ್ಯ, ನೀಡಿರುತ್ತಾರೆ. ನ್ಯಾಯಾಧೀಶೆ ಸರಿತಾ ಡಿ. ಅವರು ಇತ್ತಂಡಗಳ ವಾದ ಆಲಿಸಿ ಆರೋಪಿಗೆ ಪೋಕ್ಸೋ ಕಾಯ್ದೆ ಕಲಂ 10ರಡಿ ಅಪರಾಧಕ್ಕೆ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.20,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆ. ಭಾ.ದಂ.ಸಂ. ಕಲಂ 354(ಎ) ರಡಿ ಅಪರಾಧಕ್ಕೆ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿರುತ್ತಾರೆ. ದಂಡದ ಮೊತ್ತದಲ್ಲಿ ರೂ. 20,000/- ವನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಲಾಗಿದೆ. ನೊಂದ ಬಾಲಕಿಯಾದ ಪ್ರಾ.ಸಾ.1 ರವರಿಗೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 357A ಯಡಿಯಲ್ಲಿ ರೂ. 20,000/- ವನ್ನು ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾನ್ಯ ನ್ಯಾಯಾಲಯ ಆದೇಶಿಸಿದೆ.
ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.


























