ಬೆಳಗಾವಿ: ಬಿಜೆಪಿ ಸಮಾವೇಶದಲ್ಲಿ ಕೂಗಲಾಗುವ “ಜೈ ಶ್ರೀರಾಮ್” ಘೋಷಣೆ ಬಗ್ಗೆ ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗೆ ಘೋಷಣೆ ಕೂಗುವವರು ಭಿಕಾರಿಗಳು ಎಂದು ಕಿಡಿಕಾರಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಹಿಂದೆ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಕಡಿಮೆ ಲೀಡ್ ಕೊಟ್ಟರೆ ಕರೆಂಟ್ ಕಟ್ ಎಂಬ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಬೆಳಗಾವಿಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ರಾಜು ಕಾಗೆ, ಬಿಜೆಪಿಯವರು ಪ್ರತಿ ಸಮಾವೇಶ, ರೋಡ್ ಶೋಗಳಲ್ಲಿ ‘ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾರೆ. ಇಂಥದ್ದನ್ನೆಲ್ಲ 40 ವರ್ಷಗಳ ಹಿಂದೆಯೇ ನಾನು ಮಾಡಿ ಬಿಟ್ಟಿದ್ದೇನೆ. ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ನಾನು ಸಮರ್ಥವಾಗಿ ಉತ್ತರ ಕೊಡುತ್ತೇನೆ. ಅವರು ಗತಿ ಇಲ್ಲದ ಭಿಕಾರ್ ಛೋಟ್ (ಗತಿ ಇಲ್ಲದ ಭಿಕಾರಿಗಳು) ಇದ್ದಾರೆ ಎಂದು ನಾವು ಆ ಲೆವೆಲ್‌ಗೆ ಇಳಿಯುವುದಕ್ಕೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಗುರುವಾರ ಮತಯಾಚನೆ ಮಾಡಿದ್ದ ರಾಜು ಕಾಗೆ, “ಜುಗುಳ ಮತ್ತು ಮಂಗಾವತಿ ಗ್ರಾಮಗಳಲ್ಲಿ ಕಡಿಮೆ ಲೀಡ್ ಕೊಟ್ಟಲ್ಲಿ ಕರೆಂಟ್ ಕಟ್” ಮಾಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, 24 ಗಂಟೆಯೊಳಗಾಗಿ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.