ದಕ್ಷಿಣ ಕನ್ನಡ: ಹೊಸ ಪೊಲೀಸ್ ಠಾಣೆ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಮಾಣಿಗೆ ಹಾಗೂ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮಕ್ಕೆ ಬಜೆಟ್ ನಲ್ಲಿ ಹೊಸ ಪೊಲೀಸ್ ಠಾಣೆ ಮಂಜೂರಾಗಿದೆ. ಕಾನೂನು-ಸುವ್ಯವಸ್ಥೆ ಬಲಪಡಿಸುವ ಹಾಗೂ ಜನರಿಗೆ ವೇಗವಾಗಿ ಪೊಲೀಸ್ ಸೇವೆ ಒದಗಿಸಲು ಕೈಗೊಂಡಿದ್ದಾರೆ.
ಬೆಂಗಳೂರು, ಬೆಳಗಾವಿ, ಯಾದಗಿರಿ ಸೇರಿದಂತೆ 11 ಜಿಲ್ಲೆಗಳಿಗೆ ಒಟ್ಟು 12 ಹೊಸ ಪೊಲೀಸ್ ಠಾಣೆಗಳು ಮಂಜೂರಾಗಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಗೆ 2 ಪೊಲೀಸ್ ಠಾಣೆಗಳು ಮಂಜೂರಾಗಿದೆ. ಹೊಸ ಠಾಣೆಗಳು ಮಂಜೂರಾಗಿರುವ ಸಜೀಪನಡು ಹಾಗೂ ಮಾಣಿ ಪ್ರದೇಶ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತ್ತು.
ಈ ಭಾಗದ ಜನರು ಪೊಲೀಸ್ ಸೇವೆ ಪಡೆಯಲು ದೂರದ ಬಂಟ್ವಾಳ ಠಾಣೆಗಳಿಗೆ ಹೋಗಬೇಕಾಗಿರುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ.
ಹೊಸ ಠಾಣೆ ಸ್ಥಾಪನೆಯಾದರೆ ಮಾಣಿ ಹಾಗೂ ಸುತ್ತಲಿನ ಗ್ರಾಮಗಳಿಗೆ ತ್ವರಿತವಾಗಿ ಪೊಲೀಸ್ ಸೇವೆ ದೊರೆಯಲಿದೆ. ಜೊತೆಗೆ ಅಪರಾಧ ನಿಯಂತ್ರಣ, ಸಂಚಾರ ನಿಯಂತ್ರಣ ಹಾಗೂ ಸಾರ್ವಜನಿಕ ಭದ್ರತೆ ಕಾಪಾಡಲು ಸಹಾಯವಾಗಲಿದೆ.
ಸ್ಥಳೀಯ ಸಾರ್ವಜನಿಕರು ಈ ಯೋಜನೆಯನ್ನು ಸ್ವಾಗತಿಸಿದ್ದು, ಶೀಘ್ರದಲ್ಲೇ ಸರ್ಕಾರ ಸ್ಥಳ ಆಯ್ಕೆ ಮಾಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕೃತ ಸ್ಥಳ ಹಾಗೂ ಆರಂಭದ ದಿನಾಂಕವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಹೊಸ ಠಾಣೆ ನಿರ್ಮಾಣವಾದ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹೊರೆ ಕಡಿಮೆಯಾಗಲಿದೆ.


























