ಗದಗ, ಮೇ 05: ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ. ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬರುತ್ತೆ. ಇದರಿಂದ ರಾಜ್ಯ ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಬರಬಹುದು. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಬಡವರಿಗೆ ಭಾಗ್ಯಗಳನ್ನು ಕೊಡುವುದಕ್ಕೆ ವಿರೋಧವಿಲ್ಲ. ಇದಕ್ಕೆ ತಗಲುವ ವೆಚ್ಚ ಎಷ್ಟು ಅಂತ ಸಿದ್ದರಾಮಯ್ಯ ನೋಡಬೇಕಿತ್ತು. ಬಸವರಾಜ ಬೊಮ್ಮಾಯಿಯವರ ಅವಧಿ ಮುಗಿದಾಗ 25 ಸಾವಿರ ಕೋಟಿ ರೂಪಾಯಿ ಅನುದಾನ ರಾಜ್ಯದ ಖಜಾನೆಯಲ್ಲಿತ್ತು. ಅದು ಖಾಲಿಯಾಗಿ 1 ಲಕ್ಷ 85 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬಸ್ ಫ್ರೀ ಅಂದರ, 10 ಬಸ್ ಓಡುವಲ್ಲಿ ನಾಲ್ಕು ಬಸ್ ಓಡುತ್ತಿವೆ. ಕೆಟ್ಟ ಬಸ್ಗಳನ್ನು ರಿಪೇರಿ ಮಾಡಲು ಹಣ ಇಲ್ಲ. ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ. ಶಾಸಕರ ಸಂಬಳವೂ ಸರಿಯಾಗಿ ಆಗುತ್ತಿಲ್ಲ. 2-3 ತಿಂಗಳಿಗೊಮ್ಮೆಯಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದರು.
ಹೆಚ್ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನು ಕ್ರಮ ತೆಗೆದುಕೊಂಡಿದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಬರುತ್ತಾರೆ ಅನ್ನೊ ಮಾಹಿತಿ ಇದೆ. ತನಿಖೆ ಪೂರ್ಣವಾಗಲಿ ಸತ್ಯ ಹೊರಬರಲಿ. ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಬಿಜೆಪಿಗೆ ಪರಿಣಾಮ ಬೀರಲ್ಲ. ಘಟನೆಯಾಗಬಾರದಿತ್ತು ಅನ್ನೋ ನೋವಿದೆ. ದೇಶದ ಮಾಜಿ ಪ್ರಧಾನಿ ಈ ವಯಸ್ಸಿನಲ್ಲಿ ಯಾತನೆ ಅನುಭವಿಸುವುದು ನೋವಾಗಿದೆ. ಆದರೆ ಅದಕ್ಕೂ ಬಿಜೆಪಿಗೆ ಸಂಬಂಧ ಇಲ್ಲ. ನಮಗೆ ಮೊದಲೆ ಗೊತ್ತಿದ್ದರೇ ಮೈತ್ರಿಯ ಅವಶ್ಯಕತೆ ಇರುತ್ತಿರಲಿಲ್ಲ. ಪ್ರಜ್ವಲ್ ರೇವಣ್ಣ ವಿಷಯ ಬಹಳ ಎಳೆಯುವುದು ಬೇಡ. ಕುಮಾರಸ್ವಾಮಿ ಅವರೇ ಹೇಳಿದ್ದಾರೆ, ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳಿದರು.























