ಸಿಬ್ಬಂದಿಯ ಕೆಲಸ ಮತ್ತು ಬದುಕಿನ ಸಮತೋಲನವನ್ನು ಸುಧಾರಿಸುವ ಸಲುವಾಗಿ ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ಇನ್ನು ವಾರದಲ್ಲಿ ಐದು ದಿನ ಮಾತ್ರ ಕೆಲಸ ಎಂಬ ಪ್ರಸ್ತಾವಿತ ಶಿಫ್ಟ್ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗ್ರಾಹಕರು,ಇದನ್ನ ಅಳವಡಿಸುವ ಮೊದಲು ಜನರ ಬಳಿ ಅಭಿಪ್ರಾಯ ಕೇಳಿ ಇದು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ಬ್ಯಾಂಕ್ ಒಕ್ಕೂಟಗಳು ಇದಕ್ಕೆ ಒಪ್ಪಿಗೆ ನೀಡಿದ್ದರೂ, ಸರ್ಕಾರ ಇನ್ನೂ ಪ್ರಸ್ತಾವನೆಯನ್ನು ಅನುಮೋದಿಸಿಲ್ಲ.
ಭಾನುವಾರದ ಜತೆ ಎಲ್ಲ ಶನಿವಾರವೂ ಬ್ಯಾಂಕ್‌ಗಳಿಗೆ ರಜೆ ನೀಡಿದರೆ ವಾರದ ದಿನಗಳಲ್ಲಿ ದೀರ್ಘ ಸರತಿ ಸಾಲುಗಳು ಮತ್ತು ಕೆಲಸ ವಿಳಂಬವಾಗುವ ಸಾಧ್ಯತೆ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೂ ಇದು ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಹೆಚ್ಚಿನ ಒತ್ತು ನೀಡುವುದನ್ನು ಉತ್ತೇಜಿಸಬಹುದು ಎನ್ನುತ್ತಾರೆ ವಿಶ್ಲೇಷಕರು.
ಹೆಚ್ಚಿದ ರಜಾದಿನಗಳು ದೇಶದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಎಲ್ಲಾ ಬ್ಯಾಂಕುಗಳು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಇದಕ್ಕಾಗಿ ದೈನಂದಿನ ಕೆಲಸದ ಸಮಯವನ್ನು ವಿಸ್ತರಿಸುವುದರ ಜೊತೆಗೆ ಡಿಜಿಟಲ್ ಮತ್ತು ಎಟಿಎಂ ಸೇವೆಗಳನ್ನು ಹೆಚ್ಚಿಸುವುದು ಒಳಗೊಂಡಿರುತ್ತದೆ.
2023ರ ಡಿಸೆಂಬರ್‌ನಲ್ಲಿ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ (IBA) ನಡುವೆ ತಿಳಿವಳಿಕೆಯ ಜ್ಞಾಪಕ ಪತ್ರಕ್ಕೆ ಸಹಿ ಹಾಕಲಾಯಿತು. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಸಾಲದಾತರು ಮತ್ತು ಬ್ಯಾಂಕ್ ಒಕ್ಕೂಟಗಳು ಸೇರಿವೆ. ಈ ಒಪ್ಪಂದವು ಸರ್ಕಾರದ ಅನುಮೋದನೆಗೆ ಒಳಪಟ್ಟು 5 ದಿನಗಳ ಕೆಲಸದ ವಾರದ ಪ್ರಸ್ತಾಪವನ್ನು ಒಳಗೊಂಡಿದೆ.
2024ರ ಮಾರ್ಚ್ 8ರಂದು 9ನೇ ಜಂಟಿ ಟಿಪ್ಪಣಿಗೆ IBA ಮತ್ತು ಬ್ಯಾಂಕ್ ಒಕ್ಕೂಟಗಳು ಸಹಿ ಹಾಕಿದವು. IBA ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಿಂದ ಸಹಿ ಮಾಡಲಾದ ಜಂಟಿ ಟಿಪ್ಪಣಿಯು ಶನಿವಾರ ಮತ್ತು ಭಾನುವಾರಗಳ ರಜೆಯೊಂದಿಗೆ 5 ದಿನದ ವಾರಕ್ಕೆ ಪರಿವರ್ತನೆಯನ್ನು ವಿವರಿಸಿದೆ
ಐಬಿಎ ಮತ್ತು ಬ್ಯಾಂಕ್ ಯೂನಿಯನ್‌ಗಳು ಒಪ್ಪಿಗೆ ನೀಡಿದ್ದರೂ ಅಂತಿಮ ನಿರ್ಧಾರವು ಸರ್ಕಾರದ್ದಾಗಿದೆ. ಈ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ (ಆರ್‌ಬಿಐ) ಚರ್ಚಿಸಲಾಗುವುದು. ಏಕೆಂದರೆ ಅದು ಬ್ಯಾಂಕಿಂಗ್ ಸಮಯ ಮತ್ತು ಅಂತರ್ ಬ್ಯಾಂಕ್ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಗಡುವನ್ನು ಘೋಷಿಸಿಲ್ಲ. ಆದರೂ ಈ ವರ್ಷದ ಅಂತ್ಯದ ವೇಳೆಗೆ ಅಥವಾ 2025ರ ಆರಂಭದಲ್ಲಿ ಸರ್ಕಾರದ ಅಧಿಸೂಚನೆ ಸಿಗುವ ಸಾಧ್ಯತೆ ಇದೆ. ಪ್ರಸ್ತುತ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗುತ್ತಿದೆ.