ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡುವ 28 ಸೆಕೆಂಡ್‌ಗಳ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರು ಹಂಚಿಕೆ ಮಾಡೋದಾಗಿ ಹೇಳಿದ್ದಾರೆ ಎಂದು ಬಿಂಬಿಸಲಾಗಿದೆ.
ಈ ವೈರಲ್ ವಿಡಿಯೋದಲ್ಲಿ ಕೇಳಿ ಬರುವ ಆಡಿಯೋದಲ್ಲಿ ಖರ್ಗೆ ಅವರು ಹಿಂದಿಯಲ್ಲಿ ಮಾತನಾಡುತ್ತಾ ಒಂದಷ್ಟು ವಿವರಿಸುತ್ತಾರೆ. ಹಿಂದಿ ಭಾಷಣದ ಕನ್ನಡ ಅನುವಾದ ಇಂತಿದೆ. ‘ಕಾಂಗ್ರೆಸ್ಸಿಗರು ಏನು ಮಾಡಲಿದ್ದಾರೆ ಗೊತ್ತೇ? ಕಾಂಗ್ರೆಸ್ ಪಕ್ಷದ ಜನರು ನಿಮ್ಮ ಮನೆಗೆ ನುಗ್ಗಲಿದ್ದಾರೆ, ನಿಮ್ಮ ಮನೆಯ ಕಬೋರ್ಡ್ ಮುರಿಯಲಿದ್ದಾರೆ, ನಿಮ್ಮ ಮನೆಯಲ್ಲಿ ಇರುವ ಹಣವನ್ನು ಇತರರಿಗೆ ಹಂಚಲಿದ್ದಾರೆ. ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದ್ದಾರೆ. ಒಂದಕ್ಕಿಂತಾ ಹೆಚ್ಚು ಮಕ್ಕಳು ಇರುವವರಿಗೆ ಹಂಚಲಿದ್ದಾರೆ. ಅಣ್ಣಂದಿರಾ ಹೇಳಿ, ನಿಮಗೆ ಮಕ್ಕಳು ಇಲ್ಲದಿದ್ದರೆ ಏನು ಮಾಡಲು ಸಾಧ್ಯ?’
ಸಂಸ್ಥೆ ಈ ವಿಡಿಯೋ ಪರಿಶೀಲನೆ ನಡೆಸಿದ ವೇಳೆ ಈ ವಿಡಿಯೋವನ್ನು ಅಪಾರ್ಥ ಬರುವ ರೀತಿಯಲ್ಲಿ ತಿರುಚಲಾಗಿತ್ತು ಎಂದು ಖಚಿತವಾಗಿದೆ. ಈ ವೈರಲ್ ವಿಡಿಯೋದ ಅಸಲಿ ವಿಡಿಯೋದಲ್ಲಿ ಖರ್ಗೆ ಅವರು ಪ್ರಧಾನಿ ಮೋದಿ ಅವರ ಮಾತನ್ನು ಪುನರುಚ್ಚರಿಸುತ್ತಾರೆ.
ಇದೀಗ ವೈರಲ್ ಆಗಿರುವ ವಿಡಿಯೋದ ತುಣುಕನ್ನ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ video ಲಭ್ಯವಾಯ್ತು. 2024ರ ಮೇ 2 ರಂದು ಈ ವಿಡಿಯೋ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಪರಿಶೀಲಿಸಿದ ಖಾತೆಯಲ್ಲಿ ಲೈವ್ ಸ್ಟೀಮ್ ಆಗಿತ್ತು. ಈ ವಿಡಿಯೋದಲ್ಲಿ ಇರುವ ಮಾಹಿತಿ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾರೆ.
ಈ ವಿಡಿಯೋದ 31:49ನೇ ನಿಮಿಷದಲ್ಲಿ ಖರ್ಗೆ ಅವರು 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ಕುರಿತಾಗಿ ಮಾತನಾಡುತ್ತಾರೆ. ‘ನಾವು ಜಾತಿ ಗಣತಿ ಮೂಲಕ ಯಾವ ಸಮುದಾಯದಲ್ಲಿ ಎಷ್ಟು ವಿದ್ಯಾವಂತ ಜನರು ಇದ್ದಾರೆ ಎಂದು ತಿಳಿಯಲು ಬಯಸುತ್ತೇವೆ. ಎಷ್ಟು ಪದವೀಧರರು ಇದ್ದಾರೆ, ಅವರ ಆದಾಯ ಎಷ್ಟು? ತಲಾದಾಯ ಎಷ್ಟು? ಇದನ್ನೆಲ್ಲಾ ಅರಿಯಲು ನಾವು ಜಾತಿ ಗಣತಿ ನಡೆಸಬೇಕೆಂದು ಹೇಳುತ್ತಿದ್ದೇವೆ’ ಎಂದು ಖರ್ಗೆ ಹೇಳುತ್ತಾರೆ.
ನಂತರ ತಮ್ಮ ಮಾತು ಮುಂದುವರೆಸುವ ಖರ್ಗೆ, ‘ನಮ್ಮ ಪ್ರಣಾಳಿಕೆಯಲ್ಲಿ ಈ ರೀತಿ ವಿವರಿಸಿದ್ದೇ ತಡ ಪ್ರಧಾನಿ ಮೋದಿ ಅವರು ಕೂಡಲೇ ಪ್ರಶ್ನಿಸಿದರು. ಕಾಂಗ್ರೆಸ್ ಏನು ಮಾಡಲು ಹೊರಟಿದೆ ಎಂದು ಕೇಳಿದರು. ಕಾಂಗ್ರೆಸ್ ನಾಯಕರು ಜನರ ಮನೆಗಳಿಗೆ ನುಗ್ಗಲಿದ್ದಾರೆ, ಅವರ ಕಬೋರ್ಡ್ ಒಡೆಯಲಿದ್ದಾರೆ, ಅವರ ಬಳಿ ಇರುವ ಹಣ ಲೂಟಿ ಮಾಡಿ ಅದನ್ನು ಬೇರೆಯವರಿಗೆ ಕೊಡಲಿದ್ದಾರೆ. ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ಕೊಡಲಿದ್ದಾರೆ. ಸಹೋದರರೇ ನಿಮಗೆ ಮಕ್ಕಳು ಇಲ್ಲವಾದರೆ ನಾವು ಏನು ಮಾಡೋಕೆ ಸಾಧ್ಯ?’