ರಾಜ್ಯದ 20 ಪ್ರತಿಭೆಗಳಿಂದ ಪ್ರೇಕ್ಷಕರಿಗೆ ಕಾಮಿಡಿಯ ರಸದೌಣ ನೀಡಲು ಜೀ ಕನ್ನಡ ವಾಹಿನಿ ಸಿದ್ಧತೆ ನಡೆಸಿದೆ. ಹೌದು, ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ ಈ ಬಾರಿ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಶೋನಲ್ಲಿ ನಟ ಜಗ್ಗೇಶ್ ಮಹಾ ತೀರ್ಪುಗಾರರಾಗಿದ್ದರೆ, ಐದು ಸ್ಟಾರ್ ನಿರೂಪಕರುಗಳಾದ ಅನುಶ್ರೀ, ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್ ರವರು ಜಡ್ಜಸ್‌ಗಳಾಗಿದ್ದಾರೆ. ವಿಶೇಷ ಅಂದ್ರೆ ಕಿಲಾಡಿ ಪ್ಲೇಯರ್‌ಗಳಲ್ಲಿ ಪುತ್ತೂರಿನ ಪ್ರತಿಭೆ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ 150 ಸ್ಪರ್ಧಿಗಳ ಪೈಕಿ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 10 ನಟರಲ್ಲಿ ಇವರಿಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.
ಪುತ್ತೂರಿನ ಪವಿತ್ರ ಹೆಗ್ಡೆ ಬಗ್ಗೆ ಹೇಳುವುದಾದರೆ, ಇವರು ಪುತ್ತೂರು ಚಂದ್ರಶೇಖರ್ ಹೆಗ್ಡೆ ಮತ್ತು ಮಾಯಾದೇವಿ ಅವರ ಪುತ್ರಿಯಾಗಿದ್ದು ಪುಜ್ವಲ್ ಹೆಗ್ಡೆಯವರ ಪತ್ನಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ತಂಡದಲ್ಲಿ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದಾರೆ. 6ನೇ ತರಗತಿಯಿಂದ ನಾಟಕ ಅಭಿನಯ, 2012ರಿಂದ ಮಂಗಳೂರಿನ ಮಾನಸ ಕಲಾವಿದರು ತಂಡದಲ್ಲಿ 3 ವರ್ಷ ಅಭಿನಯ ಮಾಡಿದ್ದಾರೆ. ಇನ್ನು ತುಳು ಸಿನೆಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನೊಬ್ಬರು ಪುತ್ತೂರಿನ ಸಂಸಾರ ಕಲಾವಿದೆರ್ ತಂಡದ ವೈರಲ್ ಸ್ಟಾರ್ ಖ್ಯಾತಿಯ ಗಣರಾಜ್ ಭಂಡಾರಿ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀನಿಧಿ ಸೆಲೂನ್’ನಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದು, ತನ್ನ ಸ್ವಂತ ರೀಲ್ಸ್ ಪೇಜ್’ನಲ್ಲಿ 25 ಸಾವಿರ ಕ್ಕು ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ನಾಗೇಶ್ ಬಲ್ನಾಡು ನಿರ್ದೇಶನದ ಸೂಪರ್ ಹಿಟ್ ನಾಟಕ “ಮಲ್ಲಕ್ಕನ ಇಲ್ಲೊಕ್ಕೆಲ್” ಮೂಲಕ ರಂಗಪ್ರವೇಶ ಮಾಡಿದ ಇವರು ಬದ್ಕ್ ರೆ ಕಲ್ಪಿ, ಊರುಗೊರಿ ವಿಶ್ವನಾಥ, ಮಗೆ ಮಲ್ಲಯೆ, ಒವುಲಾ ಒರಿಯುಜಿ, ಸತ್ಯನಾ ಭಕ್ತಿ, ತಪ್ಪು ಎನ್ನೊಡ್ಡಿ, ಭಾಗ್ಯ ಬೋಡು ಅಲ್ಲದೆ ಈ ವರ್ಷದ ಸೂಪರ್ ಹಿಟ್ ಯಶಸ್ವಿ ನಾಟಕ ನಂಬಿಕೆದಾಯೆ ನಾಟಕಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.