ತೆಲಂಗಾಣದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದರು. “ಕಾಂಗ್ರೆಸ್ ಮಹಾರಾಜ ಈಗ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ, ಚುನಾವಣೆಗಾಗಿ ಉದ್ಯಮಿಗಳಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಕಾಳಧನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರು ಅಂಬಾನಿ, ಅದಾನಿ ಬಗ್ಗೆ ಈಗ ಮಾತನಾಡುತ್ತಿಲ್ಲ” ಎಂದು ಟೀಕಿಸಿದರು.
“ಕಳೆದ ಐದು ವರ್ಷಗಳಿಂದ ರಾಹುಲ್ ಗಾಂಧಿ ಅವರು ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದರು. ರಾಫೆಲ್ ವಿಚಾರವಾಗಿ ಮಾಡಿದ ಆರೋಪವು ನೆಲಕಚ್ಚಿತು. ಅದಾದ ಬಳಿಕ ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಪರೋಕ್ಷ ಆರೋಪ ಶುರುವಿಟ್ಟುಕೊಂಡರು. ಅದಾದ ಬಳಿಕ ಅಂಬಾನಿ-ಅದಾನಿ ಎಂದು ನೇರವಾಗಿ ಆರೋಪ ಮಾಡಿದರು.
ಆದರೆ, ಚುನಾವಣೆ ಘೋಷಣೆಯಾಗುತ್ತಲೇ ರಾಹುಲ್ ಗಾಂಧಿ ಅವರು ಅಂಬಾನಿ ಹಾಗೂ ಅದಾನಿ ಹೆಸರೇ ಎತ್ತುತ್ತಿಲ್ಲ. ರಾಹುಲ್ ಗಾಂಧಿ ಏಕೆ ಈಗ ರಾತ್ರೋರಾತ್ರಿ ಬದಲಾದರು? ಏಕೆ ಅವರು ಅಂಬಾನಿ-ಅದಾನಿ ಹೆಸರು ಹೇಳುತ್ತಿಲ್ಲ” ಎಂದು ಪ್ರಶ್ನಿಸಿದರು. ಅಂಬಾನಿ-ಅದಾನಿ ಹೆಸರಿಟ್ಟುಕೊಂಡು ಟೀಕೆ ಮಾಡುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಈಗ ಮೋದಿ ಅವರು ಉದ್ಯಮಿಗಳ ಹೆಸರು ಪ್ರಸ್ತಾಪಿಸಿಯೇ ಟೀಕಿಸಿದ್ದಾರೆ. “ನರೇಂದ್ರ ಮೋದಿ ಅವರು ಕೆಲವು ಉದ್ಯಮಿಗಳಿಗೆ ಮಾತ್ರ ನೆರವು ನೀಡುತ್ತಾರೆ. ಅವರಿಗಾಗಿಯೇ ಅವರು ಆಡಳಿತ ಮಾಡುತ್ತಾರೆ. ಕೇಂದ್ರ ಸರ್ಕಾರದ ಹಣವು ಅಂಬಾನಿ-ಅದಾನಿಗೆ ಮಾತ್ರ ಹೋಗುತ್ತದೆ. ಬಡವರಿಗೆ ಮೋದಿ ಸರ್ಕಾರದಿಂದ ಯಾವುದೇ ಉಪಯೋಗವಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದರು.