ಪುತ್ತೂರು: ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ 14 ಮತ್ತು 17ರ ವಯೋಮಾನದ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟವು ಸೆ.11ರಂದು ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿಡ್ಪಳ್ಳಿ ಚರ್ಚ್ ನ ಧರ್ಮಗುರು ಫಾ.ಸಂತೋಷ್ ಮಿನೇಜಸ್ ಮಾತನಾಡಿ, ಕ್ರೀಡೆ ಸೋಲು ಗೆಲುವಿಗೆ ಸೀಮಿತವಾದುದಲ್ಲ. ಅದು ನಮ್ಮ ಭವಿಷ್ಯದ ಜೀವನಕ್ಕೆ ಶಿಸ್ತು, ಸಮಯ ಪಾಲನೆ, ಆತ್ಮ ವಿಶ್ವಾಸ, ಪರಿಶ್ರಮ ತಂಡದ ಮನೋಭಾವನೆ ಕಲಿಸುತ್ತದೆ. ಕ್ರೀಡೆಯಲ್ಲಿ ತಂಡದ ಎಲ್ಲರ ಸಹಕಾರವಿದ್ದಾಗ ಮಾತ್ರ ತಂಡ ಗೆಲುವು ಸಾಧಿಸಲಿದ್ದು ಇದೇ ಪಾಠವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಎದುರಾಳಿ ತಂಡವನ್ನು ಪ್ರೀತಿಸಿ ಕ್ರೀಡಾ ಸ್ಪೂರ್ತಿಯಿಂದ ಆಡಬೇಕು. ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಮಹತ್ವ ನೀಡಬೇಕು. ಆರೋಗ್ಯ ಕರ ದೇಹ, ದೃಢವಾದ ಮನಸ್ಸು ಜೀವನದ ಭವಿಷ್ಯದ ಯಶಸ್ಸಿಗೆ ಬಹುಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಥನಿ ಶಿಕ್ಷಣ ಮಂಡಳಿಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಡಾ.ಭಗಿನಿ ಮಾರಿಯೋಲ ಮಾತನಾಡಿ, ಕ್ರೀಡೆ ಜೀವನದಲ್ಲಿ ಶಿಸ್ತು ತಂಡದ ಮನೋಭಾವ, ಪರಸ್ಪರ ಗೌರವ, ಸೋಲನ್ನು ಸ್ವೀಕರಿಸುವ ಧೈರ್ಯ ಹಾಗೂ ಆತ್ಮ ವಿಶ್ವಾಸ ಕಲಿಸುತ್ತದೆ. ಗೆದ್ದಾಗ ವಿನಯದಿಂದ ಇದ್ದು ಸೋತಾಗ ಧೈರ್ಯ ದಿಂದ ಸ್ವೀಕರಿಸುವುದೇ ನಿಜವಾದ ಕ್ರೀಡಾ ಮನೋಭಾವವಾಗಿದೆ ಎಂದರು.
ಮುಖ್ಯ ಅತಿಥಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಮಾತನಾಡಿ, ಪುತ್ತೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಆಡಬೇಕಾದ ಅನಿವಾರ್ಯತೆ ಇಲ್ಲ. ಒಳಾಂಗಣ ಕ್ರೀಡಾಂಗಣ ದಲ್ಲಿ ಆಡುವ ಅವಕಾಶ ದೊರೆಯಲಿದ್ದು ಪುತ್ತೂರಿನ ಬಹಳಷ್ಟು ವರ್ಷದ ಶಾಸಕರ ಮೂಲಕ ನಮ್ಮ ಬೇಡಿಕೆ ಈಡೇರುತ್ತಿದೆ. 400 ಮೀಟರ್ ನ ಸಿಂಥೆಟಿಕ್ ಟ್ರಾಕ್ ನಿರ್ಮಾಣಗೊಳ್ಳಿದೆ ಎಂದು ಹೇಳಿದ ಅವರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ವ್ಯವಸ್ಥಿತವಾಗಿ ಆಯೋಜನೆಗೊಂಡಿದೆ ಎಂದು ಹೇಳಿದರು.
ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ
ಕರುಣಾಕರ ಮಣಿಯಾಣಿ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಪ್ರವೀಣಾ ರೈ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್, ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಇಸ್ಮಾಯಿಲ್ ಶಾಫೀ, ಶಾಲಾಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ನಿಕಟ ಪೂರ್ವ ಉಪಾಧ್ಯಕ್ಷ ರಘುನಾಥ ರೈ, ನಗರ ವಲಯದ ನೊಡೆಲ್ ಅಧಿಕಾರಿ ಕೃಷ್ಣಯ್ಯ, ಪುತ್ತೂರು ತಾಲೂಕು ಗ್ರೇಡ್ ವನ್ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚಕ್ರಪಾಣಿ, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ
ರಕ್ಷಕ ಶಿಕ್ಷಕ ಸಂಘದ ಸದಸ್ಯ ರಝಾಕ್ ಬಪ್ಪಳಿಗೆ, ಪ್ರೈಮ್‌ಫೋಟ್ ಗ್ಯಾಲರಿಯ ಇಬ್ರಾಹಿಂ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಎ.ಆರ್ ಕ್ಯಾಸ್ಟಲಿನೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಥನಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ ವಂದಿಸಿದರು. ಶಿಕ್ಷಕರಾದ ಸೌಮ್ಯ ಎಸ್ ಹಾಗೂ ಅನಿತಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾವಳಿಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಬಾಲಕ, ಬಾಲಕಿಯರ ಒಟ್ಟು 40 ತಂಡಗಳು ಭಾಗವಹಿಸಿದ್ದರು.
























