ಮೈಸೂರು: ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ, ಮೋದಿಯವರನ್ನು ಹೊಗಳಿ ಹಾಡು ಬರೆದು ಹಾಡಿದ್ದಕ್ಕೆ ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಹಿಂದು ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಆ ಘಟನೆಯ ಬೆನ್ನಲ್ಲೇ, ಅರಮನೆ ನಗರಿಯಲ್ಲಿ ಸಂತ ಫಿಲೋಮಿನಾ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಜಯತು ಜಯತು ಶ್ರೀ ರಾಮ’ ಗೀತೆ ಹಾಡುವ ವೇಳೆ ಹಿಂದೂ ಯುವಕನಿಗೆ ಥಳಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಾಪ್ ಸಿಂಹ ವಿಡಿಯೋ ಶೇರ್ ಮಾಡ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನ ಸಂತ ಫಿಲೋಮಿನಾ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಗಿತ್ತು. ಮನರಂಜನೆ ಕಾರ್ಯಕ್ರಮಕ್ಕೆ ಖ್ಯಾತ ಹಿನ್ನೆಲೆ ಗಾಯಕ ಹರ್ಷ ಅವರನ್ನ ಕರೆಸಲಾಗಿತ್ತು. ಪ್ರೋಗ್ರಾಂ ಅದ್ಭುತವಾಗಿ ಮೂಡಿ ಬಂದಿತ್ತು .ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಜನರು ಖುಷಿಯಾಗಿ ಎಂಜಾಯ್ ಮಾಡ್ತಿದ್ದರು. ಆದ್ರೆ, ಏಕಾಏಕಿ ಒಂದು ಗುಂಪು ಗಲಾಟೆ ಶುರುಮಾಡಿ ಓರ್ವ ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಅಧಿಕೃತವಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆದ್ರೆ, ‘ಜಯತು ಜಯತು ಶ್ರೀ ರಾಮ’ ಹಾಡು ಹಾಡುವ ಸಮಯದಲ್ಲೇ ಗಲಾಟೆ ಹೆಚ್ಚಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ. ಇದೆ ವಿಚಾರವನ್ನ ಕೇಂದ್ರೀಕರಿಸಿ ಸಂಸದ ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದೆ ಎಂಬ ಅಂಶವನ್ನ ಉಲ್ಲೇಖಿಸಿದ್ದಾರೆ.