ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ (Dr C N Manjunath) ಅವರು ಫಲಿತಾಂಶ ಬರುವ ಮೊದಲೇ ವೈದ್ಯ ವೃತ್ತಿಗೆ ಮರಳಿದ್ದಾರೆ. ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಅವರು ಕಾರ್ಯಾರಂಭ ಮಾಡಿದ್ದಾರೆ.
ಬೆಂಗಳೂರು ಆಸ್ಪತ್ರೆʼಯಲ್ಲಿ ಹೊಸದಾಗಿ ಕಾರ್ಡಿಯಾಲಜಿ ವಿಭಾಗ ಆರಂಭಿಸಲಾಗಿದ್ದು, ಇಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರು ಸೇವೆ ಸಲ್ಲಿಸಲು ಆರಂಭಿಸಿದ್ದಾರೆ. ಇವರು ವಾರದಲ್ಲಿ ಮೂರು ದಿನ ಈ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಲಭ್ಯರಾಗಲಿದ್ದಾರೆ.
ಅನಿವಾಸಿ ಭಾರತೀಯ ಕೃಷ್ಣ ಸ್ವರೂಪ ಅವರು ಈ ಆಸ್ಪತ್ರೆಯನ್ನು ಖರೀದಿಸಿ ಇದಕ್ಕೆ ಅತ್ಯಾಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ಬಡವರಿಗೆ ಇಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗಲಿದೆ. ಯಶಸ್ವಿನಿ, ಸುವರ್ಣ ಆರೋಗ್ಯ ಇತ್ಯಾದಿ ಸರ್ಕಾರಿ ವೈದ್ಯಕೀಯ ಯೋಜನೆಗಳು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯ ಆಗಲಿವೆ. ಇದು 150 ಬೆಡ್‌ಗಳ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.
ಡಾ.ಸಿ.ಎನ್. ಮಂಜುನಾಥ್ ಅವರಂಥ ಅಪರೂಪದ ಹೃದ್ರೋಗ ತಜ್ಞರ ಸೇವೆ ಸಾಮಾನ್ಯ ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಯ ನೆಲ ಮಹಡಿಯಲ್ಲಿ 50 ಬೆಡ್ ಸಾಮರ್ಥ್ಯದ ಹೃದ್ರೋಗ ವಿಭಾಗ ತೆರೆಯಲಾಗಿದೆ. ಮಾಸ್ಟರ್ ಹೆಲ್ತ್ ಚೆಕಪ್ ಸೌಲಭ್ಯವೂ ಇಲ್ಲಿದೆ. ಹೊಸ ತಂತ್ರಜ್ಞಾನದ ಸಿಟಿ ಸ್ಕ್ಯಾನ್ ಕೂಡ ಇದೆ ಎಂದು ಈ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಭಿಷೇಕ್ ತಿಳಿಸಿದ್ದಾರೆ.