ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಮಾವಿನ ಹಣ್ಣಿನ ಹೆಸರು ಕೇಳಿದರೇ ಸಾಕು ಬಾಯಲ್ಲಿ ನೀರು ಬರುವುದು ಸಹಜ. ಈಗಾಗಲೇ ಮಾವಿನ ಸುಗ್ಗಿ ಆರಂಭವಾಗಿದ್ದು, ಮಾರುಕಟ್ಟೆಗೆ ಬಗೆ ಬಗೆಯ ಮಾವಿನ ಹಣ್ಣು ಬರುತ್ತಿವೆ. ಆದರೆ ಇದರೊಂದಿಗೆ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳು ಪತ್ತೆ ಆಗಿವೆ. ಹೀಗಾಗಿ ಬಾಯಿ ಚಪ್ಪರಿಸುತ್ತ ಮಾವಿನ ಹಣ್ಣು ತಿನ್ನುವವರು ಎಚ್ಚರಿಕೆ ವಹಿಸಬೇಕಿದೆ.
ರಾಸಾಯನಿಕ ಬಳಸಿ ಕೃತಕವಾಗಿ ಮಾವಿನ ಕಾಯಿ ಹಣ್ಣು ಮಾಡುವ ಆರೋಪ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, ಮಾವಿನ ಹಣ್ಣು ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ.
ಆಹಾರ ಸುರಕ್ಷತೆ ಗುಣಮಟ್ಟ ತಪಾಸಣೆ ಜಂಟಿ ಅಧಿಕಾರಿಗಳಿಂದ ಸಂತೆ ವ್ಯಾಪಾರಿಗಳು ಹಾಗೂ ರಸ್ತೆ ಬದಿ ಹಣ್ಣು ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಪತ್ತೆಯಾದ ರಾಸಾಯನಿಕ ಮಾವಿನ ಹಣ್ಣುಗಳ ರಾಶಿಯನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ.
ಹಣ್ಣು ಖರೀದಿ ಮಾಡುವಾಗಲೇ ಈ ಬಗ್ಗೆ ಪರೀಕ್ಷೆ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಕೃತಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳ ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.