ನವದೆಹಲಿ: ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಇದೀಗ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿ ಸಾಬೀತು ಪಡಿಸಿದ್ದಾರೆ. ವಯಸ್ಸಿನ ಮಿತಿ ನಿಯಮಗಳನ್ನು ಮೀರಿ ಸುಮಾರು ನಾಲ್ಕು ದಶಕಗಳ ಕಾಲ ಯೋಗಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಶಾರ್ಲೆಟ್ ಚಾಪಿನ್ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಅನ್ನು ನೀಡಿ ಗೌರವಿಸಲಾಯಿತು.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಸಿರು ಸೀರೆಯನ್ನು ಧರಿಸಿದ ಶಾರ್ಲೆಟ್ ಚಾಪಿನ್ ವೇದಿಕೆಯತ್ತ ನಡೆದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಚಾಪಿನ್ ಫ್ರಾನ್ಸ್ ಮೂಲದವರಾಗಿದ್ದು, ಪ್ರಸ್ತುತ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ವಯಸ್ಸಿನ ಮಿತಿಯ ಮಾನದಂಡಗಳನ್ನು ಮೀರಿ ಚಾಪಿನ್ ಅವರು 50 ವರ್ಷ ವಯಸ್ಸಿನ ಅನಂತರ ಯೋಗವನ್ನು ಕಲಿತರು. 1982 ರಲ್ಲಿ ಫ್ರಾನ್ಸ್ ನಲ್ಲಿ ಕಲಿಸಲು ಪ್ರಾರಂಭಿಸಿದರು. ಅವರು ದೇಶದಲ್ಲಿ ಯೋಗದ ಅಲೆಯನ್ನು ಸೃಷ್ಟಿಸಿದರು.