ಬೆಂಗಳೂರು: ಆಲ್‌ರೌಂಡ್ ಆಟವಾಡಿದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ನೆಲದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಮಣಿಸುವ ಮೂಲಕ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ-ಆಫ್ಸ್ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ಇದು ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಸಿಕ್ಕ ಸತತ 5ನೇ ಗೆಲುವಾಗಿದೆ. ಆಡಿದ 13 ಪಂದ್ಯಗಳಲ್ಲಿ ಚಾಲೆಂಜರ್ಸ್ 6 ಜಯದೊಂದಿಗೆ 12 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಈಗ 5ನೇ ಸ್ಥಾನಕ್ಕೇರಿದೆ. ಮೇ 18ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರ್‌ಸಿಬಿ ಗೆದ್ದಿದ್ದೇ ಆದರೆ ಸುಲಭವಾಗಿ ಪ್ಲೇ-ಆಫ್ಸ್‌ಗೆ ಕಾಲಿಡಲಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಪ್ರವಾಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 188 ರನ್‌ಗಳ ಕಠಿಣ ಗುರಿ ಬೆನ್ನತ್ತಿತ್ತು. ನಾಯಕ ಅಕ್ಷರ್ ಪಟೇಲ್ (59) ಹೋರಾಟದ ಹೊರತಾಗಿ ಬ್ಯಾಟಿಂಗ್ ವೈಫಲ್ಯ ಕಂಡ ಕ್ಯಾಪಿಟಲ್ಸ್ ಬಳಗ 19.1 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲ್‌ಔಟ್ ಆಯಿತು. ಆರ್‌ಸಿಬಿ ಪರ ಬ್ಯಾಟಿಂಗ್‌ನಲ್ಲಿ 32 ರನ್ ಕೊಡುಗೆ ಕೊಟ್ಟು, ಬಳಿಕ ಬೌಲಿಂಗ್‌ನಲ್ಲಿ 19ಕ್ಕೆ 1 ವಿಕೆಟ್ ಪಡೆದ ಕ್ಯಾಮೆರಾನ್ ಗ್ರೀನ್ ಪಂದ್ಯಶ್ರೇಷ್ಠ ಗೌರವ ಪಡೆದರೆ, ಯಶ್ ದಯಾಳ್ 20ಕ್ಕೆ 3 ವಿಕೆಟ್ ಪಡೆದು ಎದುರಾಳಿ ಬ್ಯಾಟರ್‌ಗಳ ಸದ್ದಡಗಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ 13ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ಸವಾಲಿನ ಸ್ಕೋರ್ ಕಲೆಹಾಕಿತು. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳನ್ನು ಕಲೆಹಾಕಿತು.
ಆರಂಭದಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ (6) ವಿಕೆಟ್ ಕಳೆದುಕೊಂಡ ಆರ್‌ಸಿಬಿಗೆ ಆಸರೆಯಾಗಿ ನಿಂತ ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 27 ರನ್ ಬಾರಿಸಿ ವೇಗದ ಬೌಲರ್ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು. ಔಟ್‌ಸೈಡ್ ಆಫ್ ಎಸೆತವನ್ನು ಮುಟ್ಟಿ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತ ಕೊಹ್ಲಿ, ದೊಡ್ಡ ನಿಂಗ್ಸ್ ಆಡುವ ಅವಕಾಶ ಕೈಚೆಲ್ಲಿದ ಬೇಸರದಲ್ಲೇ ಪೆವಿಲಿಯನ್ ಸೇರಿದರು.
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಜತ್ ಪಾಟಿದಾರ್ 32 ಎಸೆತಗಳಲ್ಲಿ ತಲಾ 3 ಫೋರ್ ಮತ್ತು ಸಿಕ್ಸರ್‌ಗಳೊಂದಿಗೆ 52 ರನ್ ಸಿಡಿಸಿದರೆ, ವಿಲ್ ಜಾಕ್ಸ್ 29 ಎಸೆತಗಳಲ್ಲಿ 41 ರನ್‌ಗಳ ಕೊಡುಗೆ ಕೊಟ್ಟರು. ಕ್ಯಾಪಿಟಲ್ಸ್ ಪರ ವೇಗಿಗಳಾದ ಖಲೀಲ್ ಅಹ್ಮದ್ ಮತ್ತು ರಸಿಖ್ ಸಲಾಮ್ ಸ್ಲಾಗ್ ಓವರ್‌ಗಳಲ್ಲಿ ತಲಾ 2 ವಿಕೆಟ್ ಪಡೆದು ಆರ್‌ಸಿಬಿ 200 ರನ್‌ಗಳ ಗಡಿ ದಾಟದಂತೆ ಮಾಡಿದರು.
ಸತತ ನಾಲ್ಕು ಗೆಲುವಿನ ಬಳಿಕ ಆತ್ಮವಿಶ್ವಾಸದ ಅಲೆಯದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ-ಆಫ್ಸ್ ಅರ್ಹತೆ ಸಲುವಾಗಿ ಮನೆಯಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾಯಕಾರಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಪೈಪೋಟಿ ನಡೆಸಿತು. ಈ ಪಂದ್ಯದಲ್ಲಿ ಆರ್‌ಸಿಬಿಗೆ ಕೇವಲ ಗೆಲುವಷ್ಟೇ ಅಲ್ಲ ನೆಟ್‌ರನ್‌ರೇಟ್‌ನಲ್ಲೂ ಮೇಲುಗೈ ತಂದುಕೊಳ್ಳುವ ಅನಿವಾರ್ಯತೆ ಇತ್ತು. ಮಹತ್ವದ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟ್ ಮಾಡುವ ಸವಾಲು ಪಡೆಯಿತು.