ಪ್ಯಾರಿಸ್: ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುತ್ತಿರುವ ಫ್ರಾನ್ಸ್, ತನ್ನ ಮನೆಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂಸಾತ್ಮಕ ಪ್ರತಿಭಟನೆಗಳಿಗೆ ವಲಸಿಗ ಮುಸ್ಲಿಮರನ್ನು ಫ್ರಾನ್ಸ್ ಒಳಬಿಟ್ಟುಕೊಂಡಿದ್ದೇ ಕಾರಣ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರನ್ನು ಕೆರಳಿಸಿದ್ದು, ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು “ಸ್ಟೂಪಿಡ್ ಸ್ಟೇಟ್‌ಮೆಂಟ್” ಎಂದು ಜರೆದಿದ್ದಾರೆ.
“ಫ್ರಾನ್ಸ್‌ನಲ್ಲಿನ ಉದ್ವಿಗ್ನ ಸಾಮಾಜಿಕ ವಾತಾವರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿದೇಶಿ ನಾಯಕರು, ಸತ್ಯಕ್ಕೆ ದೂರವಾದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇದರಲ್ಲಿ ಅಟ್ಲಾಂಟಿಕ್ ಮಹಾಸಾಗರದ ಆಚೆಗಿರುವ ದೇಶದ ನಾಯಕರೂ ಸೇರಿದ್ದಾರೆ” ಎಂದು ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಪರೋಕ್ಷವಾಗಿ ಡೊನಾಲ್ಡ್ ಟ್ರಂಪ್ ವಿರುದ್ಧ ಗುಡುಗಿದ್ದಾರೆ. ಈ ಹಿಂಸಾತ್ಮಕ ಪ್ರತಿಭಟನೆಗಳು ಈಗ ಎರಡು ದೇಶಗಳ ಅಧ್ಯಕ್ಷರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಜೀವನ ವೆಚ್ಚದ ಏರಿಕೆ ವಿರುದ್ಧ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಒತ್ತಾಯಿಸಿ, ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಜಾಗತಿಕ ಗಮನ ಸೆಳೆದಿವೆ. ಈ ಅಶಾಂತಿಗೆ ಮುಸ್ಲಿಂ ವಲಸಿಗರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಆರೋಪಿಸಿದ್ದಾರೆ. ಅವರ ಈ ವಿಶ್ಲೇಷಣೆಯನ್ನು ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು, “ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ” ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ಲದೇ ದೇಶದ ಗಡಿ ಮುಚ್ಚುವಿಕೆಯ ಸಲಹೆಯನ್ನು “ಹಾಸ್ಯಾಸ್ಪದ” ಎಂದು ಅವರು ಕರೆದಿದ್ದಾರೆ.
ವಲಸಿಗರು ಫ್ರಾನ್ಸ್‌ನನ್ನು ನುಂಗಿ ಹಾಕಲಿದ್ದಾರೆ ಎಂದು ಪ್ರತಿಪಾದಿಸುತ್ತಿರುವ ಡೊನಾಲ್ಡ್ ಟ್ರಂಪ್, “ಪ್ಯಾರಿಸ್ ಮುಸ್ಲಿಂ ನಗರ ಎಂದು ಶೀಘ್ರದಲ್ಲೇ ಘೋಷಿಸಲ್ಪಡಲಿದೆ” ಎಂದು ಎಚ್ಚರಿಸಿದ್ದಾರೆ. ಸಂಪೂರ್ಣ ಭಿನ್ನವಾದ ಜಗತ್ತಿನಿಂದ ಬಂದ, ತಮ್ಮ ಹೃದಯದಲ್ಲಿ ದ್ವೇಷವನ್ನು ಹೊತ್ತಿರುವ ಜನರ ವಲಸೆಯು, ಒಂದು ಕಾಲದಲ್ಲಿ ಶ್ರೇಷ್ಠವಾಗಿದ್ದ ಈ ದೇಶವನ್ನು ಛಿದ್ರಗೊಳಿಸಿದೆ. ತೀರಾ ತಡವಾಗುವ ಮುನ್ನವೇ ಫ್ರಾನ್ಸ್ ತನ್ನ ಗಡಿಗಳನ್ನು ಮುಚ್ಚಬೇಕು” ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದರು.
“ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಶಾಲೆಗಳಿಗಾಗಲಿ ಅಥವಾ ಬೇರೆ ಯಾವುದೇ ಅನ್ಯ ಬೇಡಿಕೆಗಳ ಈಡೇರಿಕೆಗಾಗಿ ಅಲ್ಲ. ಇದು ಸಂಪೂರ್ಣವಾಗಿ ವಲಸೆಗೆ ಸಂಬಂಧಿಸಿದ್ದಾಗಿದೆ. ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರಂತ ಉದಾರವಾದಿ ನಾಯಕರು ಮುಸ್ಲಿಂ ವಲಸೆಗಾರರನ್ನು ಕೈಚಾಚಿ ತಬ್ಬಿಕೊಳ್ಳುತ್ತಿದ್ದಾರೆ. ಹೀಗೆ ಬಂದ ವಲಸಿಗರು ಆ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಫ್ರಾನ್ಸ್ ಜನತೆ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ತಡ ಮಾಡಿದರೆ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ” ಎಂದು ಅಮೆರಿಕ ಅಧ್ಯಕ್ಷರು ಎಚ್ಚರಿಸಿದ್ದಾರೆ.
ಬಲಪಂಥೀಯರು, ಆಶ್ರಯ ಬಯಸಿ ಯುರೋಪ್‌ಗೆ ಬಂದ ವಲಸಿಗರು ಈಗ ನಮ್ಮ ಖಂಡವನ್ನು ಅಶಾಂತಿಯ ಗೂಡನ್ನಾಗಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಂದರೆ ಯುರೋಪ್‌ನಲ್ಲಿ ಕಂಡುಬರುತ್ತಿರುವ ಪ್ರತಿಭಟನೆಗಳಿಗೆ ವಲಸೆಯೇ ಪ್ರಮುಖ ಕಾರಣ ಎಂದು ವಾದಿಸುತ್ತಿರುವ ಈ ಗುಂಪು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಬಲವಾಗಿ ಸಮರ್ಥಸಿಕೊಳ್ಳುತ್ತಿದೆ. ಆದರೆ ಮೇಲ್ನೋಟಕ್ಕೆ ಈ ಪ್ರತಿಭಟನೆಗಳು ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ನಡೆಯುತ್ತಿರುವಂತೆ ಕಂಡುಬರುತ್ತಿರುವುದಂತೂ ಸತ್ಯ. ಇದಕ್ಕೆ ಪೂರಕವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಯಾವುದೇ ದೇಶದ ಸರ್ಕಾರ, ಇದುವರೆಗೂ ಹಿಂಸಾಚಾರಕ್ಕೆ ವಲಸಿಗ ಸಮುದಾಯ ಕಾರಣ ಎಂದು ಹೇಳಿಕೆ ನೀಡಿಲ್ಲ.
ಅತಿಯಾದ ಹಣದುಬ್ಬರ ಮತ್ತು ಜೀವನ ವೆಚ್ಚದ ಏರಿಕೆಯ ವಿರುದ್ಧ ದೇಶಾದ್ಯಂತ ಈ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಫ್ರಾನ್ಸ್‌ನ ಆಂತರಿಕ ಸಚಿವಾಲಯದ ಪ್ರಕಾರ 5,50,000 ಜನರು ಇದರಲ್ಲಿ ಭಾಗವಹಿಸಿದ್ದರೆ, ಸಿಜಿಟಿ ಒಕ್ಕೂಟವು ಈ ಸಂಖ್ಯೆ 8,00,000 ಎಂದು ತಿಳಿಸಿದೆ. ಇಲ್ಲಿಯವರೆಗೆ ವರದಿಯಾಗಿರುವ ಬೇಡಿಕೆಗಳು ಮುಖ್ಯವಾಗಿ ಬೆಲೆಗಳು ಮತ್ತು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿವೆಯೇ ಹೊರತು, ವಲಸೆಗೆ ಸಂಬಂಧಿಸಿದ್ದಲ್ಲ. ಒಟಿನಲ್ಲಿ ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ, ಹಿಂಸಾತ್ಮಕ ಪ್ರತಿಭಟನೆಗಳಿಗೆ ತುರ್ತು ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಹೇಳಬಹುದು.
























