ಪುತ್ತೂರು: ರಾಜಧಾನಿ ಬೆಂಗಳೂರನ್ನು ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಮೂಲಕ ಗೋವಾದ ಮಡಗಾಂವ್ನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನ.13ರಂದು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಈ ರೈಲು ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ವೇಗದ ಮತ್ತು ಆಧುನಿಕ ಸಂಪರ್ಕ ಕಲ್ಪಿಸಲಿದ್ದು, ಹಾಸನ, ಸಕಲೇಶಪುರ, ಮಂಗಳೂರು, ಕಬಕ-ಪುತ್ತೂರು, ಉಡುಪಿ, ಮುರುಡೇಶ್ವರ, ಗೋಕರ್ಣ, ಕಾರವಾರ ಮಾರ್ಗವಾಗಿ ಮಡಗಾಂವ್ ತಲುಪಲಿದೆ. ಸುಮಾರು 670 ಕಿ.ಮೀ. ಕ್ರಮಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಬೆನ್ನಲ್ಲೆ ಮಂಗಳೂರು ರೈಲ್ವೇ ಜಂಕ್ಷನ್ನಿಂದ ರೈಲಿನ ಮೂಲಕ ಪುತ್ತೂರಿಗೆ ಆಗಮಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಕೆಲಕಾಲ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಬಳಿಕ ಅದೇ ರೈಲಿನಲ್ಲಿ ಸುಬ್ರಹ್ಮಣ್ಯ ಸಂಪರ್ಕಿಸುವ ನೆಟ್ಟಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಕೋಷ್ಠದ ಸಹಸಂಚಾಲಕ ಪ್ರಸನ್ನ ದರ್ಬೆ, ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನೂ ಪ್ರಧಾನಿ ಇದೇ ವೇಳೆ ಲೋಕಾರ್ಪಣೆ ಮಾಡಿದ್ದು, ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಬೆಂಗಳೂರು-ಮಂಗಳೂರು ಸಂಪೂರ್ಣ ರೈಲು ಮಾರ್ಗವು ಈಗ ವಿದ್ಯುದ್ದೀಕರಣಗೊಂಡಂತಾಗಿದೆ.
ಯಶವಂತಪುರ ಮಂಗಳೂರು ಮಡಗಾಂವ್ ವಂದೇ ಭಾರತ್ ಟಿಕೆಟ್ ದರ ಎಷ್ಟಿದೆ?
| ಎಲ್ಲಿಂದ | ಎಲ್ಲಿಗೆ | ಎಸಿ ಕಾರ್ ಚೇರ್ (ರೂ.) | ಎಕ್ಸಿಕ್ಯೂಟಿವ್ ಚೇರ್ ಕಾರ್ (ರೂ.) |
| ಬೆಂಗಳೂರು ಯಶವಂತಪುರ | ಮಂಗಳೂರು ಜಂಕ್ಷನ್ | 952 | 1887 |
| ಬೆಂಗಳೂರು | ಹಾಸನ | 544 | 1081 |
| ಬೆಂಗಳೂರು | ಶ್ರವಣಬೆಳಗೊಳ | 474 | 941 |
| ಬೆಂಗಳೂರು | ಸಕಲೇಶಪುರ | 624 | 1236 |
| ಬೆಂಗಳೂರು | ಸುಬ್ರಹ್ಮಣ್ಯ ರೋಡ್ | 807 | 1602 |
| ಬೆಂಗಳೂರು | ಉಡುಪಿ | 1081 | 2,660 |
| ಬೆಂಗಳೂರು | ಕುಂದಾಪುರ | 1161 | 2,327 |
| ಬೆಂಗಳೂರು | ಪುತ್ತೂರು | 872 | 1722 |
| ಬೆಂಗಳೂರು | ಬೈಂದೂರು | 1236 | 2472 |
| ಬೆಂಗಳೂರು | ಮರುಡೇಶ್ವರ | 1291 | 2577 |
| ಬೆಂಗಳೂರು | ಗೋಕರ್ಣ ರೋಡ್ | 1406 | 2832 |
| ಬೆಂಗಳೂರು | ಕಾರವಾರ | 1469 | 2953 |
| ಬೆಂಗಳೂರು | ಗೋವಾ ಮಡಗಾಂವ್ | 1549 | 3098 |
ಮೇಲಿನ ದರವು ಕ್ಯಾಟರಿಂಗ್ ಹೊರತುಪಡಿಸಿದ್ದಾಗಿದೆ. ತಿಂಡಿಗೆ ಸುಮಾರು 150, ಮಧ್ಯಾಹ್ನ ಊಟ 300 ಹಾಗೂ ರಾತ್ರಿ ಊಟ 300 ರೂ. ಆಗಬಹುದು

























