ಬೆಳ್ತಂಗಡಿ: ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮೇ 20ರಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಿಜೆಪಿ ಪ್ರತಿಭಟನೆ ನಡೆಸುವ ಮುನ್ಸೂಚನೆ ದೊರೆತ ಬಳಿಕ ಪೊಲೀಸರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ರಿಕ್ಷಾದಲ್ಲಿ ಬೆಳ್ತಂಗಡಿ ಪೇಟೆಯಲ್ಲಿ ಧ್ವನಿವರ್ಧಕ ಮೂಲಕ ಎಚ್ಚರಿಕೆ ರವಾನಿಸಿದ್ದರು.
ಮಧ್ಯಾಹ್ನ 1 ಗಂಟೆಯ ಬಳಿಕ ಬಿಜೆಪಿಯ ನೂರಾರು ಕಾರ್ಯಕರ್ತರು ಲಾಯಿಲ ಬಳಿಯಿಂದ ತಾಲೂಕು ಕಚೇರಿಗೆ ಮುಖ್ಯ ರಸ್ತೆಯಲ್ಲೇ ಜಾಥಾದಲ್ಲಿ ಘೋಷಣೆಗಳನ್ನು ಕೂಗುತ್ತಾ ಆಗಮಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಯಂತ ಕೋಟ್ಯಾನ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.