ಮಂಗಳೂರು: ಕರ್ನಾಟಕ ಕರಾವಳಿಯ ತುಳುನಾಡಿನ ವಿಶಿಷ್ಟ ಆಚರಣೆಯಾದ ʼಪ್ರೇತ ಮದುವೆʼಗೆ ಸಜ್ಜಾಗಿದ್ದ ವಧುವಿಗೆ ವರ ಹಾಗೂ ದಿನಾಂಕ ಫಿಕ್ಸ್ ಆಗಿದೆ. ಆಷಾಢ (ಆಟಿ) ತಿಂಗಳಲ್ಲಿ ಮದುವೆ ನಡೆಯಲಿದೆ. ಇದು ಎರಡು ʼಆತ್ಮಗಳʼ ಮದುವೆಯಾಗಿದ್ದು, ಸಾಂಪ್ರದಾಯಿಕ ಜಾನಪದ ರೀತಿಯಲ್ಲಿ ನಡೆಯುತ್ತದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಧುವೊಬ್ಬಳಿಗೆ ʼವರ ಬೇಕಾಗಿದೆ’ ಎಂಬ ಜಾಹೀರಾತು ಭಾರಿ ಸುದ್ದಿಯಾಗಿತ್ತು. ಜ್ಯೋತಿಷ್ಯ ಪ್ರಕಾರ ನೋಡಿದಾಗ, ಹೆಣ್ಣುಮಗಳ ಆತ್ಮಕ್ಕೆ ವಿವಾಹ ಆಗಬೇಕು ಎಂದು ಕಂಡುಬಂದಿತ್ತು ಎನ್ನಲಾಗಿದೆ. ನಂತರ ಆಕೆಗೆ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಜಾಹೀರಾತು ಪ್ರಕಟಿಸಲಾಗಿತ್ತು.
ಇದೀಗ ಈ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ’ನೊಬ್ಬ ನಿಗದಿಯಾಗಿದ್ದಾನೆ. ಮುಂದಿನ “ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. “ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ” ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.ಪ್ರೇತ ಮದುವೆಯಲ್ಲಿ, ಜೀವಂತ ಇರುವಾಗ ನಡೆಯದಿದ್ದ ಮದುವೆ ಕ್ರಮಗಳನ್ನು ಎರಡೂ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತವೆ. ಮುಂದಿನ ರವಿವಾರ “ಪ್ರೇತ ವರ’ನ ಕಡೆಯವರು “ವಧು’ವಿನ ಮನೆಗೆ ಬರಲಿದ್ದಾರೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎನ್ನುತ್ತಾರೆ ಪುತ್ತೂರು ನಿವಾಸಿ.
ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ. ವಿವಿಧ ಸಮಾಜದ ಬಂಧುಗಳು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮನೆಗೆ ಪ್ರೇತ ವರ ಬೇಕಾಗಿದ್ದ ಹಾಗೆಯೇ ನೂರಾರು ಮನೆಗೆ ವಧು-ವರ ಬೇಕಾಗಿದ್ದ ವಿಚಾರ ಆ ಸಂದರ್ಭ ಬೆಳಕಿಗೆ ಬಂತು. ಈ ಕುರಿತು ಜಾಗೃತಿಯೊಂದು ಮೂಡಿದಂತಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಮನೆಯವರು.