ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದಿರುವ ಪತ್ರದಲ್ಲಿ ಚುನಾವಣಾ ಆಯೋಗ, “ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷವಾಗಿ ಬಿಜೆಪಿಯು ಭಾರತದ ಸಂಯುಕ್ತ ಹಾಗೂ ಸೂಕ್ಷ್ಮ ರಚನೆಯ ವಾಸ್ತವಿಕ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಚುನಾವಣಾ ವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸುವುದನ್ನು ನಿರೀಕ್ಷಿಸಲಾಗಿದೆ” ಎಂದು ಹೇಳಿದೆ.
ಮಾದರಿ ನೀತಿ ಸಂಹಿತೆ ಅಡಿಯಲ್ಲಿ ನಿರ್ಬಂಧಿಸಲಾಗಿರುವಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ತನ್ನ ಎಲ್ಲ ತಾರಾ ಪ್ರಚಾರಕರಿಗೆ ಸೂಚನೆ ನೀಡುವಂತೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆಯೋಗ ನಿರ್ದೇಶಿಸಿದೆ. “ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ವಿಭಿನ್ನ ಜಾತಿಗಳು ಅಥವಾ ಸಮುದಾಯ, ಧರ್ಮ ಅಥವಾ ಭಾಷೆಗಳ ನಡುವೆ ಪರಸ್ಪರ ದ್ವೇಷ ಸೃಷ್ಟಿಸುವ ಅಥವಾ ಉದ್ವಿಗ್ನತೆ ಮೂಡಿಸುವ ಅಥವಾ ಪ್ರಸ್ತುತ ಇರುವ ಮನಸ್ತಾಪಗಳನ್ನು ಹೆಚ್ಚಿಸುವಂತಹ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು” ಎಂದು ಹೇಳಿದೆ.ಸಮಾಜವನ್ನು ಒಡೆಯುವಂತಹ ಭಾಷಣ ಅಥವಾ ಹೇಳಿಕೆಗಳನ್ನು ನೀಡದಂತೆ ಎಲ್ಲ ತಾರಾ ಪ್ರಚಾರಕರಿಗೆ ಸೂಚಿಸಲು ಅದು ಬಿಜೆಪಿಗೆ ಆದೇಶಿಸಿದೆ. ಧಾರ್ಮಿಕ ಕೋಮು ವಿಚಾರಗಳನ್ನು ಎಳೆಯುವ ಪ್ರಚಾರ ವಿಧಾನದಿಂದ ದೂರ ಇರುವಂತೆ ಸ್ಟಾರ್ ಕ್ಯಾಂಪೇನರ್‌ಗಳಿಗೆ ಸೂಚಿಸಿದೆ. ಸಭ್ಯ ಭಾಷಣಗಳನ್ನು ಮಾಡುವಂತೆ ಅದು ಆಗ್ರಹಿಸಿದೆ.
ಖರ್ಗೆ ಅವರಿಗೆ ಪತ್ರ ಬರೆದಿರುವ ಆಯೋಗ, ತಾರಾ ಪ್ರಚಾರಕರು ರಕ್ಷಣಾ ಪಡೆಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ರಾಜಕೀಯ ಪ್ರೊಪಗಂಡದಲ್ಲಿ ತೊಡಗದಂತೆ ನಿರ್ಬಂಧಿಸಲು ಸೂಚನೆ ನೀಡಿದೆ. ಭಾರತದ ಸಂವಿಧಾನವನ್ನು ರದ್ದುಗೊಳಿಸಲಾಗುತ್ತದೆ ಅಥವಾ ಮಾರಾಟ ಮಾಡಲಾಗುತ್ತದೆ ಎಂಬಂತಹ ಸುಳ್ಳು ಭಾವನೆಗಳನ್ನು ಮೂಡಿಸುವ ಹೇಳಿಕೆಗಳನ್ನು ಸಹ ನೀಡದಂತೆ ಎಚ್ಚರಿಕೆ ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಮಂಗಳಸೂತ್ರ’ ಹೇಳಿಕೆ ಹಾಗೂ ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚುವ ಆರೋಪದ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿತ್ತು. ಇತ್ತ ಬಿಜೆಪಿ ಕೂಡ, ಪ್ರಧಾನಿ ಮೋದಿ ಅವರು ಒಂದು ದೇಶ, ಒಂದು ಭಾಷೆ ಮತ್ತು ಒಂದು ಧರ್ಮಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪದ ವಿರುದ್ಧ ದೂರು ಕೊಟ್ಟಿತ್ತು.