ಕಾರವಾರ: ಟಿಪ್ಪರ್ ಲಾರಿ ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ದಂಡ ಹಾಕಿ ರಶೀದಿ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಘಟನೆ ನಡೆದಿದೆ.
ಹೊನ್ನಾವರದ ಉಸುಕು ಸಾಗಾಟದ ಟಿಪ್ಪರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ್ದಾರೆ. ಹೊನ್ನಾವರದ ಉಪ್ಪೋಣಿಯ ವಿನುತಾ ವಿನೋದ ನಾಯ್ಕ ಮಾಲೀಕತ್ವದ ಟಿಪ್ಪರ್ ಲಾರಿಯನ್ನು ಚಾಲಕ ಚಂದ್ರಕಾಂತ ಎಂಬಾತ ಚಲಾಯಿಸುತ್ತಿದ್ದ.
ಚಂದ್ರಕಾಂತ ಸಮವಸ್ತ್ರ ಧರಿಸದೇ ವಾಹನ ಚಲಾಯಿಸಿದ್ದನ್ನು ಕಂಡು ಪೊಲೀಸರು ವಾಹನವನ್ನು ತಡೆದಿದ್ದರು. ಈ ವೇಳೆ ಹೆಲ್ಮೆಟ್ ಧರಿಸದ ಕಾರಣಕ್ಕೆ ರಶೀದಿ ನೀಡಿ 500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇತ್ತ ದಂಡದ ರಶೀದಿ ಕಂಡು ಟಿಪ್ಪರ್ ಚಾಲಕ ಅವಾಕ್ಕಾಗಿದ್ದಾರೆ. ಇನ್ನು ಟಿಪ್ಪರ್ ಲಾರಿ ಚಾಲಕನ ಹೆಲ್ಮೆಟ್ ದಂಡದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೇ ದಂಡ ಹಾಕುವಾಗ ಸಮವಸ್ತ್ರದ ಬದಲು ಹೆಲ್ಮೆಟ್ ಆಯ್ಕೆಯಾಗಿರುವುದು ಇದಕ್ಕೆಲ್ಲ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.