ಪಕ್ಷ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ ಹೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಶಿಸ್ತು ಸಮಿತಿಯು ನೀಡಿದ ನೋಟಿಸ್ ಈವರೆಗೂ ನನಗೆ ತಲುಪಿಲ್ಲ. ಮಾಧ್ಯಮಗಳ ಮೂಲಕ ಉಚ್ಚಾಟನೆ ಎಂದು ಗೊತ್ತಾಯಿತು. ಪಕ್ಷ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ ಹೇಳಲಿ ಎಂದು ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು ಎಂದು ಕಿಡಿಕಾರಿದ್ದಾರೆ.
ನಾನು ಮೋದಿಗೆ ಬೈದಿಲ್ಲ, ರಾಜ್ಯದ ನಾಯಕರಿಗೆ ಬೈದಿಲ್ಲ. ಇಂತಹ ವಜಾಗಳಿಗೆ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ಪಕ್ಷದ ಎಲ್ಲಾ ಹುದ್ದೆಯಿಂದ ವಜಾ ಮಾಡುತ್ತೇವೆ ಅಂದಿದ್ದಾರೆ. ಪಕ್ಷದ ನಾಯಕರನ್ನು ಟೀಕಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಂದರು. ಪಕ್ಷಕ್ಕೆ ವಾಪಸಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು.ಹಾಗಾದರೇ ಶೆಟ್ಟರ್ ಆರು ವರ್ಷದ ವಜಾ ಏನಾಯಿತು. ಇದು ಶಾಶ್ವತ ವಜಾ ಅಲ್ಲ ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ.ನನ್ನನ್ನು ವಜಾ ಮಾಡಬಹುದು ಆದರೆ ಬಿಜೆಪಿ ಕಾರ್ಯಕರ್ತನನ್ನ ವಜಾ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿ ಶಿಸ್ತು ಸಮಿತಿಗೆ ನನ್ನ ಹಲವು ಪ್ರಶ್ನೆ ಇದೆ ಎಂದ ಭಟ್ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಏನು ಶಿಸ್ತು ಕ್ರಮವಾಗಿದೆಯಾ..?
ಅಡ್ಡ ಮತದಾನ ಮಾಡಿದ ಇಬ್ಬರೂ ಶಾಸಕರನ್ನು ಏನು ಮಾಡಿದ್ದೀರಿ..? ವಜಾ ಮಾಡಿದ್ದೀರಾ..? ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ದೀರಾ..? ಅಗೋಚರವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡುವವರ ಮೇಲೆ ಏನು ಕ್ರಮ ಆಗಿದೆ…?
ಪಕ್ಷದ ದೃಷ್ಟಿಯಿಂದ ಜಿಲ್ಲಾಧ್ಯಕ್ಷರು ಶಾಸಕರು ಸುನಿಲ್ ಕುಮಾರ್ ಮಾಡಿರಿವುದು ಸರಿ ಇದೆ. ಪಕ್ಷದಿಂದ ವಜಾ ಮಾಡುವ ಸಮಾನ ನ್ಯಾಯ ಜಾರಿಗೆ ತನ್ನಿ. ಬಹಿರಂಗ ಹೇಳಿಕೆ ಕೊಡುವ ಭ್ರಷ್ಟಾಚಾರ ಆರೋಪ ಮಾಡುವ ನಾಯಕರ ಮೇಲೆ ನಿಮ್ಮ ಕ್ರಮ ಏನಿದೆ..? ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಸಲು ಯಾರಿಗೆ ಎಷ್ಟು ಹಣ ಹೋಗಿದೆ..? ಯಾರು ಕೆಲಸ ಮಾಡಿದ್ದಾರೆ…? ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳೇ ಆರೋಪ ಮಾಡುತ್ತಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ..? ನಾನೊಬ್ಬ ಪಾಪದ ಬಡಪಾಯಿ ಮಾತ್ರ ನಿಮಗೆ ವಜಾ ಮಾಡಲು ಸಿಕ್ಕಿದ್ದಾ ಎಂದು ಪ್ರಶ್ನಿಸಿದ್ದಾರೆ.
ನಾನು ವಿಚಲಿತನಾಗಿಲ್ಲ ಭಯವು ಇಲ್ಲ ಈ ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ. ಜಗದೀಶ್ ಶೆಟ್ಟರ್ ಅವರ ಪ್ರಕರಣವೇ ನನಗೆ ಮಾದರಿ. ಕರಾವಳಿ ಮುಗ್ದ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ ಶಿಕ್ಷೆಯೂ ಜಾಸ್ತಿ. ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಉಡುಪಿಯಲ್ಲಿ ನಾಲ್ವರು ಶಾಸಕರುಗಳನ್ನು ಬದಲಿಸಲಾಯಿತು. ಇದನ್ನು ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಮಾಡಕ್ಕಾಗುತ್ತಾ ಯಾಕೆ ಮಾಡಿಲ್ಲ ? ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಸಂಘ ಪಕ್ಷ ಅಂತ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಕರಾವಳಿ ವಿಚಾರದಲ್ಲಿ ಬಿಜೆಪಿ ಮನಬಂದಂತೆ ನಡೆದುಕೊಳ್ಳುತ್ತಿದೆ. ಈ ಚುನಾವಣೆಯಲ್ಲಿ ಮತದಾರರು ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ
ನಾನು ಕಾರ್ಯಕರ್ತರ ಧ್ವನಿಯಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.