ಕೊಣಾಜೆ ಸಮೀಪದ ಮೋಡಿಜೇರ ಎಂಬಲ್ಲಿ ಕಳ್ಳರು ಮನೆಯೊಂದರ ಬಾಗಿಲು ಮುರಿದು ಕಪಾಟಿನಲ್ಲಿದ್ದ ನಗ-ನಗದು ಕಳ್ಳತನ ನಡೆಸಿದ ಘಟನೆ ಗುರುವಾರ ನಡೆದಿದೆ.
ಕೊಣಾಜೆ ಗ್ರಾಮದ ಮೋಡಿಜೇರ ನಿವಾಸಿ ಚಂದ್ರ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದದ್ದು ಬೆಳಕಿಗೆ ಬಂದಿದೆ. ಮನೆಯಲ್ಲಿ ಚಂದ್ರ ಹಾಗೂ ಅವರ ಸಹೋದರಿ ಮಾತ್ರ ವಾಸವಾಗಿದ್ದು ಇಬ್ಬರು ಕೂಡಾ ಕೆಲಸಕ್ಕೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ನಡೆಸಿದ್ದಾರೆ. ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಅಂದಾಜಿಸಲಾಗಿದೆ.
ಚಂದ್ರ ಅವರ ಮನೆಯ ಮುಂಭಾಗದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಎರಡು ಕಪಾಟುಗಳನ್ನು ಒಡೆದಿದ್ದು. ಅದರಲ್ಲಿದ್ದ ಅಪಾರ ಮೌಲ್ಯದ ಚಿನ್ನಾಭರಣವನ್ನು ಅಲ್ಲದೆ ಸುಮಾರು ಆರು ಸಾವಿರದಷ್ಟು ನಗದನ್ನು ಕೂಡಾ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆಯ ವೇಳೆಗೆ ಮನೆಯವರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕೊಣಾಜೆ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.