ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗುತ್ತಿದ್ದಂತೆಯೇ ರಾಜ್ಯ ಕರಾವಳಿಯಲ್ಲಿ ಮಳೆಯ ವಾತಾವರಣ ಕಂಡುಬರುತ್ತಿದೆ. ಪಶ್ಚಿಮ ಘಟ್ಟದ ತಪ್ಪಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡು ಗಂಟೆ ಬಿರುಸಿನಿಂದ ಸುರಿದ ಮಳೆ ವರುಣನ ಆರ್ಭಟದ ದರ್ಶನ ಮಾಡಿಸಿದೆ.
ಧಾರಾಕಾರ ಮಳೆಗೆ ಸುಬ್ರಹ್ಮಣ್ಯ-ಗುತ್ತಿಗಾರು-ಸುಳ್ಯ ರಸ್ತೆ ಹಾಗೂ ಸುಬ್ರಹ್ಮಣ್ಯ-ಪಂಜ-ಬೆಳ್ಳಾರೆ ರಸ್ತೆಯ ಹಲವೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಬಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ಹೊಳೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಸುಬ್ರಹ್ಮಣ್ಯದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ ಘಟನೆಯೂ ನಡೆದಿದೆ. ಸುಬ್ರಹ್ಮಣ್ಯ, ಬಿಳಿನೆಲೆ, ಯೇನೆಕಲ್ಲು, ಬಳ್ಪ, ಪಂಜ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಗುತ್ತಿಗಾರು, ನಡುಗಲ್ಲು, ಎಲಿಮಲೆ, ಸಂಪಾಜೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ.
ಸುಬ್ರಹ್ಮಣ್ಯ ಸಮೀಪದ ಬಳ್ಪದಲ್ಲಿ 245 ಮಿಮೀ ಮಳೆಯಾಗಿದೆ.ಕಲ್ಲಾಜೆಯಲ್ಲಿ 115 ಮಿಮೀ,ಕಮಿಲದಲ್ಲಿ 120 ಮಿಮೀ ಮಳೆಯಾಗಿದೆ.