ಪುತ್ತೂರು: ಅಲ್ಪ ಸಂಖ್ಯಾತ ಸಮಾಜದವರು ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಸಾರ್ವಜನಿಕ ಅಶಾಂತಿ ಸೃಷ್ಠಿಸುವವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಮಗೂ ಕಾನೂನು ಇದೆ. ಸಮಾಜದ ಕೋರ್ಟ್ ಇದೆ. ಅದರ ಮೂಲಕ ಸರಕಾರಕ್ಕೆ ಉತ್ತರ ಕೊಡಲು ಸಿದ್ದರಿದ್ದೇವೆ. ನಮಗೂ ರಸ್ತೆಗಳಿವೆ. ನಾವು ರಸ್ತೆಯಲ್ಲಿ ಭಜನೆ, ಪೂಜೆಗಳನ್ನು ಮಾಡಬೇಕಾದ ದಿನಗಳು ಬರಬಹುದು. ಸರಕಾರ ಇದಕ್ಕೆ ಆಸ್ಪದ ಕೊಡದೆ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಬಜರಂಗದಳ ದಕ್ಷಿಣ ಪ್ರಾಂತ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದರು.
ಮಂಗಳೂರಿನ ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಅಶಾಂತಿ ಸೃಷ್ಠಿರುವುದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ಕೇಸು ದಾಖಲಿಸಿದ ಪೋಲಿಸ್ ಅಧಿಕಾರಿಯನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿರುವುದನ್ನು ಖಂಡಿಸಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಕ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ಅಲ್ಪ ಸಂಖ್ಯಾತ ತುಷ್ಡಿಕರಣ ಮಾಡುತ್ತಿದೆ. ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ನಮಾಜು ಮಾಡಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದರೆ ಅವರನ್ನು ರಜೆಯಲ್ಲಿ ಕಳಿಸುವ ಮೂಲಕ ಹಿಂದುಗಳು ಮತ್ತು ಮುಸಲ್ಮಾರಿಗೆ ಪ್ರತ್ಯೇಕ ಕಾನೂನಿನ ಸಂದೇಶ ನೀಡುತ್ತಿದೆ. ಇದರ ವಿರುದ್ಧ ಜನರು ದಂಗೆ ಏಳುವ ಮೊದಲು ಸರಕಾರ ಎಚ್ಚೆತ್ತಕೊಳ್ಳಬೇಕು. ನಮಾಜು ಮಾಡಿದವರ ವಿರುದ್ದ ಕ್ರಮಕೈಗೊಳ್ಳಬೇಕಾದ ಸರಕಾರ ಅದನ್ನು ಪ್ರಶ್ನಿಸಿದವರ ವಿರುದ್ಧ ಕೇಸು ದಾಖಲಿಸುತ್ತಿದೆ. ಸಮಾಜದ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯನ್ನೇ ಸರಕಾರ ಕಟ್ಟಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡದಿದ್ದರೆ ಮುಂದೆ ಅದಕ್ಕೆ ಬೆಲೆ ಕಟ್ಟ ಬೇಕಾದ ದಿನ ಬರಬಹುದು. ಘಟನೆಯನ್ನು ಪ್ರಶ್ನಿಸಿದ ಶರಣ್ ಪಂಪ್‌ವೆಲ್ ಮೇಲೆ ಕೇಸು ದಾಖಲಿಸುವುದಾದರೆ ಅಂತಹ ಸಾವಿರ ಮಂದಿಯ ಹೆಸರು ಕೊಡುತ್ತೇವೆ. ಕೇಸು ದಾಖಲಿಸಲಿ ಅಥವಾ ಗಡಿಪಾರು ಮಾಡಲಿ. ಅಲ್ಪ ಸಂಖ್ಯಾತರಿಗೊಂದು ಹಿಂದುಗಳಿಗೊಂದು ಕಾನೂನು ಮಾಡಿದರೆ ಆಗುವ ಸಂಘರ್ಷಕ್ಕೆ ನೀವೇ ಹೊಣೆಯಾಗಲಿದ್ದೀರಿ. ರಾಜ್ಯದ ಜನ ಆಧಿಕಾರ ನೀಡಿದ್ದು ಉತ್ತಮ ಆಡಳಿತಕ್ಕಾಗಿ. ಅಧಿಕಾರ ಇದೆ ಎಂದು ದರ್ಪೆ ಮೆರೆದರೆ ನಿಮ್ಮ ಹಿಂದಿನ ದಿನಗಳನ್ನು ಯೋಚಿಸಬೇಕು. ಅಶಾಂತಿ ಸೃಷ್ಠಿಸುವವರನ್ನು ರಕ್ಷಣೆ ಮಾಡುವ ಮೂಲಕ ಹಿಂದು ವಿರೋಧಿ ಕೃತ್ಯ ಮಾಡುವರಿಗೆ ಸರಕಾರ ಬೆಂಬಲ ನೀಡುತ್ತದೆ. ಕಾನೂನು ಮರೆತರೆ ಅದಕ್ಕೆ ಹಿಂದೂ ಸಮಾಜ ಯಾವ ಉತ್ತರ ನೀಡಲು ಸಿದ್ದವಿದೆ. ನಮ್ಮ ಸಹಣೆ, ತಾಳ್ಮೆಗೂ ಮಿತಿಯಿದೆ. ಅದಕ್ಕೆ ಅವಕಾಶ ಕೊಡಬಾರದು. ಸ್ವಯಂ ಪ್ರೇರಿತ ಕೇಸು ದಾಖಲು ಮಾಡಿರುವುದನ್ನು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಮೂಲಕ ತನಿಖೆ ನಡೆಸಬೇಕು. ತಪ್ಪಿತಸ್ತರಿಗೆ ಶಿಕ್ಷೆ ವಿಧಿಸಬೇಕು ಎಂದು ಮುರಳಿಕೃಷ್ಣ ಹಸಂತಡ್ಕ ಆಗ್ರಹಿಸಿದರು.
ವಿಶ್ವಹಿಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು , ಉಪಾಧ್ಯಕ್ಷ ಸತೀಶ್, ಜಯಂತ ಕುಂಜೂರುಪಂಜ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.