ನವದೆಹಲಿ: ಈ ಚುನಾವಣೆ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಮೊದಲ ಹೆಜ್ಜೆಯಾಗಿದೆ. ಮೋದಿ ಸರ್ಕಾರ ಎಲ್ಲಾ ಸಂಸ್ಥೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಲೋಕಸಭಾ ಚುನಾವಣೆಯು ಅದರ ವಿರುದ್ಧ ಹೋರಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಇಂಡಿಯ ಬ್ಲಾಕ್ 231 ಸ್ಥಾನಗಳಲ್ಲಿ ಮತ್ತು ಎನ್‌ಡಿಎ ಮೈತ್ರಿಕೂಟ 294 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿಯ ಬ್ಲಾಕ್‌ನ ಭಾಗವಾಗಿರುವ ಕಾಂಗ್ರೆಸ್ 98 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ವೇಳೆ ಕಾಂಗ್ರೆಸ್ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕೇವಲ ರಾಜಕೀಯ ಕಾರಣಕ್ಕೆ ನಾವು ಹೋರಾಟ ಮಾಡಲಿಲ್ಲ. ಹಿಂದೂಸ್ತಾನದ ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ನಾವು ಹೋರಾಡಿದೆವು. ಮೋದಿ, ಅಮಿತ್ ಶಾ ಇದೆಲ್ಲವನ್ನೂ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ನಮ್ಮನ್ನು ಹೆದರಿಸಿದರು, ದಬ್ಬಾಳಿಕೆ ಮಾಡಿದರು, ದೌರ್ಜನ್ಯ ಮಾಡಿದರು. ನಾವು ಸಂವಿಧಾನ ಉಳಿಸಲು ಹೋರಾಡಬೇಕಿತ್ತು ಎಂದು ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದು ತೋರಿಸಿದ್ದಾರೆ.
ನಿತೀಶ್ ಕುಮಾರ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನಮ್ಮ ಮೈತ್ರಿ ಪಕ್ಷಗಳನ್ನು ನಾವು ಗೌರವಿಸುತ್ತೇವೆ. ಅವರೊಂದಿಗೆ ಮಾತನಾಡದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾಳೆ ಇಂಡಿಯ ಬ್ಲಾಕ್ ನಾಯಕರ ಸಭೆ ನಡೆಯಲಿದ್ದು, ಎಲ್ಲರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ರಾಹುಲ್ ಗಾಂಧಿಗೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಜನಾದೇಶ ಮೋದಿಯವರ ವಿರುದ್ಧ ಎಂಬುದು ಸ್ಪಷ್ಟವಾಗಿದೆ. ಇದು ಅವರ ನೈತಿಕ ಮತ್ತು ರಾಜಕೀಯ ಸೋಲು. ಒಬ್ಬ ವ್ಯಕ್ತಿಯ ಮುಖ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿದೆ. ಅದನ್ನು ಜನರು ಸೋಲಿಸಿದ್ದಾರೆ. ಇದು ಬಿಜೆಪಿಯ ನೈತಿಕ ಸೋಲು. ನಾವು ಬಹಳ ವಿನಮ್ರತೆಯಿಂದ ಜನರ ತೀರ್ಪನ್ನು ಗೌರವಿಸುತ್ತೇವೆ. ಮೋದಿ ನೇತೃತ್ವದ ಎನ್ಡಿಎಗೆ ದೊಡ್ಡ ನಷ್ಟ ಆಗಿದೆ ಎಂದಿದ್ದಾರೆ.