ಲಕ್ನೋ: ಚುನಾವಣೆ ಮುಗಿಯುತ್ತಿದ್ದಂತೆ ಯೋಗಿನಾಡು ಉತ್ತರಪ್ರದೇಶದಲ್ಲಿ ಗುಂಡಿನ ಸದ್ದು ಮೊಳಗಿದೆ. ಗ್ಯಾಂಗ್‌ಸ್ಟರ್‌ವೊಬ್ಬನನ್ನು ಎನ್‌ಕೌಂಟರ್ ಮಾಡಲಾಗಿದೆ. ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದ ವಿಶೇಷ ಕಾರ್ಯಪಡೆಗಳು ಜಂಟೀ ಕಾರ್ಯಾಚರಣೆ ನಡೆಸಿ ನೀಲೇಶ್ ರೈ ಎಂಬಾತನನ್ನು ಹೊಡೆದುರುಳಿಸಿದೆ. ಮುಜಾಫರ್‌ನಗರದ ರತನ್‌ಪುರಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇನ್ನು ನೀಲೇಶ್ ರೈ ಪತ್ತೆಗೆ ಉತ್ತರಪ್ರದೇಶ ಪೊಲೀಸರು 2.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಮೂಲತಃ ಈ ಬಿಹಾರಸ ಬೇಗಸರೈ ಜಿಲ್ಲೆಯವನಾಗಿದ್ದು, ಬರೋಬ್ಬರಿ 16 ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಆತನ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆತನ ಪತ್ತೆಗಾಗಿ ಪೊಲೀಸರು ಭಾರೀ ಬಹುಮಾನ ಘೋಷಿಸಿದ್ದರು.
ಇನ್ನು ಈತ ರತನ್‌ಪುರಿ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬಿಹಾರ, ಉತ್ತರಪ್ರದೇಶ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರ ಗುಂಡೇಟು ಬಿದ್ದು ನೀಲೇಶ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.