ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯಿಸಿದ ಕಾಂಗ್ರೆಸ್ ಮುಖಂಡನೊಬ್ಬನನ್ನು ಪಕ್ಷದ ಯುವ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಎಸ್.ಎಂ ಜಗದೀಶ್ ಎಂಬವರನ್ನು ರಾಜ್ಯ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ.
ಇವರು, ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದರು. ರಾಜೀನಾಮೆಗೆ ಒತ್ತಾಯಿಸಿದ್ದರ ಕುರಿತು ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ವಿಸ್ತಾರ ನ್ಯೂಸ್ ವರದಿ ವೀಕ್ಷಣೆ ಬಳಿಕ, ಜಗದೀಶ್ ಅವರನ್ನು ಹುದ್ದೆಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಉಚ್ಛಾಟಿಸಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸದೆ, ಅನ್ಯ ಪಕ್ಷದ ಅಭ್ಯರ್ಥಿಯೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದಾನೆಂದು ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ. ಈ ಜಗದೀಶ್ ಅವರು ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್. ಮುನಿಯಪ್ಪ ಪುತ್ರನಾಗಿದ್ದಾರೆ. ಈ ಹಿಂದೆ ವಿಧಾನಸಭೆ ಚುನಾವಣೆ ಪ್ರಚಾರ ಕಣದಲ್ಲಿ ಇವರು ಪ್ರದೀಪ್ ಈಶ್ವರ ಜತೆಗಿದ್ದರು.
ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಲ್ಬಣಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ. ಸುಧಾಕರ್ ಅವರು ಸ್ಪರ್ಧಿಸಿದ್ದು, ಈ ಬಗ್ಗೆ ಪ್ರದೇಶ್ ಈಶ್ವರ್ ವ್ಯಂಗ್ಯವಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಒಂದು ಮತ ಲೀಡ್ ಪಡೆದರೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಸ್ವಪಕ್ಷದ ಶಾಸಕನ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕೂಡ ತಿರುಗಿಬಿದ್ದಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.
ಈ ಹಿಂದೆ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ “ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಅವರಿಗೆ ಒಂದೇ ಒಂದು ಮತದ ಲೀಡ್ ಸಿಕ್ಕರೂ ರಾಜಕೀಯ ನಿವೃತ್ತಿ ಪಡೆಯುವೆ” ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು. ಇದೀಗ ಆ ಹೇಳಿಕೆಯೇ ಅವರಿಗೆ ತಲೆನೋವು ತಂದಿದೆ.