ಕೆಲ ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿರುವ ಒಂಟಿ ಸಲಗ ತನ್ನ ಪ್ರಯಾಣವನ್ನು ಕೆಯ್ಯೂರು ಗ್ರಾಮ ತೆಗ್ಗು, ಎರಬೈಲಿನಿಂದ ಹೊರಟು ಮತ್ತೆ ಪುಣ್ಚಪ್ಪಾಡಿ ಗ್ರಾಮಕ್ಕೆ ಬಂದಿದೆ.
ಜೂ.6ರಂದು ಬೆಳಿಗ್ಗೆ ಕೆಯ್ಯೂರು ಗ್ರಾಮದ ತೆಗ್ಗು ಪರಿಸರದಲ್ಲಿ ಬೀಡುಬಿಟ್ಟಿದ್ದ ಕಾಡಾನೆ ರಾತ್ರಿಯೇ ಗೌರಿಹೊಳೆಗೆ ಇಳಿದು ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಮೂಲಕ ಆಗಮಿಸಿದೆ ಎನ್ನಲಾಗಿದೆ.
ಪುಣ್ಚಪ್ಪಾಡಿ ಗ್ರಾಮದ ಸಾರಕರೆ, ಬೆದ್ರಂಪಾಡಿ ಸುತ್ತಮುತ್ತ ಬಾಳೆ ಗಿಡ ಹಾಗೂ ತೆಂಗಿನ ಗಿಡಗಳಿಗೆ ಹಾನಿ ಮಾಡಿದೆ. ಜೂ.3 ರಂದು ಪಾಲ್ತಾಡಿ ಗ್ರಾಮದ ಅಸಂತಡ್ಕ, ಖಂಡಿಗೆಗೆ ಆಗಮಿಸಿದ ಆನೆ ಜೂ.4 ರಂದು ರಾತ್ರಿ ಮಲೆಮಾಡಾವಿನಲ್ಲಿ ಕೃಷಿಕರ ತೋಟದಲ್ಲಿದ್ದ ಬಾಳೆ ಗಿಡ, ಹಲಸಿನ ಹಣ್ಣುಗಳನ್ನು ತಿಂದು ಕೆಯ್ಯೂರು ಗ್ರಾಮದ ಬೊಳಿಕಳ ಮೂಲಕ ಪುಣ್ಚಪ್ಪಾಡಿ ಗ್ರಾಮದ ಅಂಜಯ, ನೂಜಾಜೆ, ನೆಕ್ರಾಜೆಗೆ ಬಂದು ಕೃಷಿ ಹಾನಿ ಮಾಡಿದೆ. ಜೂ.6ರಂದು ಮುಂಜಾನೆ 3 ಗಂಟೆಯ ತನಕ ಅರಣ್ಯಾಧಿಕಾರಿಗಳು ನೂಜಾಜೆಯಲ್ಲಿ ಬೀಡು ಬಿಟ್ಟಿದ್ದರು. ಜೂ.6ರಂದು ಬೆಳಿಗ್ಗೆ ಕಾಡಾನೆ ಕೆಯ್ಯೂರು ಗ್ರಾಮದ ತೆಗ್ಗು, ಎರಬೈಲು, ಓಲೆಮುಂಡೋವು ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಜೂ.7ರಂದು ಪುಣ್ಚಪ್ಪಾಡಿ ಗ್ರಾಮಕ್ಕೆ ಮತ್ತೆ ಕಾಡಾನೆ ಬಂದು ಕೃಷಿ ಹಾನಿ ಮಾಡಿದೆ. ಇದರಿಂದ ಜನರಿಗೆ ಆತಂಕ ಶುರುವಾಗಿದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಹೆಚ್ಚಿರುವುದರಿಂದ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಕಾಡಿನಿಂದ ಇಳಿದು ನಾಡಿಗೆ ಬಂದ ಕಾಡಾನೆಯನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾಸರಗೋಡಿನ ಪರಪ್ಪೆ ರಕ್ಷಿತಾರಣ್ಯದಿಂದ ಈ ಕಾಡಾನೆ ತಪ್ಪಿಸಿಕೊಂಡು ಬಂದಿದೆ ಎನ್ನಲಾಗಿದೆ. ಗುಂಪಿನಿಂದ ಬೇರ್ಪಟ್ಟ ಗಂಡಾನೆ ಇದಾಗಿದ್ದು, ಇದೇ ಆನೆ ಕೆಲ ತಿಂಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿತ್ತು. ಆ ಬಳಿಕ ಕೆಲ ತಿಂಗಳು ಆನೆಯ ಸುಳಿವಿರಲಿಲ್ಲ. ಇದೀಗ ಮತ್ತೆ ಒಂಟಿ ಸಲಗ ಸದ್ದು ಮಾಡಿದ್ದು ಪುಣ್ಚಪ್ಪಾಡಿ, ತೆಗ್ಗು ಪ್ರದೇಶಗಳತ್ತ ತನ್ನ ಹೆಜ್ಜೆ ಇಟ್ಟಿದೆ. ತೆಗ್ಗು ಪ್ರದೇಶದಿಂದ ಆನೆಯನ್ನು ಓಡಿಸಿದರೆ ಮತ್ತೆ ಯಾವ ಕಡೆಗೆ ಹೋಗುತ್ತದೆ ಎಂದು ತಿಳಿಯುವುದು ಕಷ್ಟ. ಏಕೆಂದರೆ ಆನೆಯನ್ನು ಓಡಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಅಲ್ಲದೆ ಆನೆಯನ್ನು ಇಂತಹ ಕಡೆಗೇ ಓಡಿಸುವುದು ಕೂಡ ಕಷ್ಟ. ಏಕೆಂದರೆ ಆನೆ ನಡೆದದ್ದೆ ದಾರಿಯಾಗಬೇಕು ವಿನಹಃ ನಾವು ಹೇಳಿದ ಕಡೆಗೆ ಆನೆಯನ್ನು ಓಡಿಸುವುದು ಕಷ್ಟಸಾಧ್ಯ.