ಬೆಳಗಾವಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನಗಳು ಭುಗಿಲೆದ್ದಿವೆ. ಅದರಲ್ಲೂ ಪ್ರಮುಖವಾಗಿ ಬೆಳಗಾವಿ ಜಿಲ್ಲಾ ಕಾಂಗ್ರಸ್ನಲ್ಲಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಹೌದು..ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಪಕ್ಷದ ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್ ವಿರುದ್ಧ ಬಹಿರಂಗವಾಗಿಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮನ್ನ ತುಳಿಯುತ್ತಿದ್ದಾರೆ ಎಂದು ಕುಡುಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್, ಸತೀಶ್ ಜಾರಕಿಹೊಳಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು.
ಇದಕ್ಕೆ ಈಗ ಸತೀಶ್ ಜಾರಕಿಹೊಳಿ ತಿರುಗೇಟು ತಿರುಗೇಟು ನೀಡಿದ್ದಾರೆ. ಅಲ್ಲದೇ ಕುಡಚಿ, ಅಥಣಿಯಲ್ಲಿ ಕಾಂಗ್ರೆಸ್ ಶಾಸಕರು ಕೆಲಸ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿಂದು (ಜೂನ್ 07) ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕುಡಚಿ, ಅಥಣಿಯಲ್ಲಿ ಕಾಂಗ್ರೆಸ್ ಶಾಸಕರು ಕೆಲಸ ಮಾಡಿಲ್ಲ. ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನ ಇದ್ದೆ. ಆದರೆ ಮಹೇಂದ್ರ ತಮ್ಮಣ್ಣವರ್ ಅವರು ನನ್ನ ಕೈಗೆ ಸಿಗಲಿಲ್ಲ. ಅಥಣಿಯಲ್ಲೂ ಹಾಗೇ ಆಯ್ತು. ಯಾರ ಬಗ್ಗೆಯೂ ಪಕ್ಷದ ವರಿಷ್ಠರಿಗೆ ದೂರು ಕೊಡುವುದಿಲ್ಲ.
ಪಕ್ಷದ ವಿರುದ್ಧ ಕೆಲಸ ಮಾಡಿದವರ ಬಗ್ಗೆ ಜನರಿಗೆ ಗೊತ್ತಾಗಬೇಕಿತ್ತು. ಅದನ್ನು ಜನರಿಗೆ ಹೇಳುವ ಕೆಲಸ ಮಾಡಿರುವೆ. ನಾವು ಸವದಿಯವರು ರಾಜಕೀಯವಾಗಿ ದೂರವಾಗಿದ್ವಿ. ಈ ಚುನಾವಣೆಯಲ್ಲಿ ನಾವು ಹತ್ತಿರ ಆಗುವುದಕ್ಕೆ ಅವಕಾಶವಿತ್ತು. ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಲೀಡ್ ಆಗುತ್ತೆ ಅಂದುಕೊಂಡಿದ್ದೆ. ಆದರೆ ಅಥಣಿಯಲ್ಲಿ ಲೀಡ್ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ಶಾಸಕ ಲಕ್ಷ್ಮಣ ಸವಿ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನು ಇದಕ್ಕೂ ಮೊದಲು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದರು.
ನನ್ನನ್ನೂ ಸೇರಿದಂತೆ ಈ ಭಾಗದ ನಮ್ಮ ದಲಿತ ನಾಯಕರನ್ನು ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ನಿರ್ನಾಮ ಮಾಡುತ್ತಿದೆ ಎಂದು ಬಹಿರಂಗವಾಗಿಯೇ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಒಟ್ಟಿನಲ್ಲಿ ಬೆಳಗಾವಿ ಕಾಂಗ್ರೆಸ್ನಲ್ಲಿ ಮತ್ತೊಂದು ಸುತ್ತಿನ ಯುದ್ಧ ಶುರುವಾಗಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
























