ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಬದಲಾಯಿಸಲು ತೆರೆಮರೆಯಲ್ಲಿ ಪಕ್ಷ ಹಾಗೂ ಸಂಘ ಪರಿವಾರದಲ್ಲಿ ಚಿಂತನೆ ನಡೆದಿದೆ.
ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿರುವ ಪ್ರಧಾನ ಬಿ.ಎಲ್. ಸಂತೋಷ್ ಅವರನ್ನು ಆರ್‌ಎಸ್‌ಎಸ್‌ನ ಇತರೆ ಸಂಘಟನಾತ್ಮಕ ಜವಾಬ್ದಾರಿ ನೀಡಲು ತೀರ್ಮಾನಿಸಿದ್ದು, ಅವರ ಜಾಗಕ್ಕೆ ಈ ಹಿಂದೆ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಸಂಜಯ ಜೋಶಿ ನೇಮಕವಾಗುವುದು ಬಹುತೇಕ ನಿಶ್ಚಿತವಾಗಿದೆ. ವಿಧಾನಸಭಾ ಚುನಾವಣೆಯಲ್ಲಿನ ಬಿಜೆಪಿಯ ‘ಕಳಪೆ’ ಪ್ರದರ್ಶನದ ಬಳಿಕ ಸೈಡ್‌ಲೈನ್ ಆಗಿದ್ದ ಸಂತೋಷ್‌ರವರಿಗೆ ಲೋಕಸಭೆಯ ಚುನಾವಣೆಯಲ್ಲೂ ರಾಜ್ಯದ ಯಾವುದೇ ಜವಾಬ್ದಾರಿ ನೀಡಿರಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡದ ಕಾರಣ ಲೋಕಸಭಾ ಚುನಾವಣೆಯಲ್ಲಿಯೂ ಅವರು ಕಾಣಿಸಿಕೊಳ್ಳಲಿಲ್ಲ.
ಕಳೆದ ಎರಡು ಬಾರಿ ಬಿಜೆಪಿಗಿದ್ದ ಸಷ್ಟ ಬಹುಮತ ಈ ಬಾರಿ ಇಲ್ಲದೇ ಇರುವುದರಿಂದ, ಎನ್‌ಡಿಎ ಮೈತ್ರಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿದೆ. ಇದರೊಂದಿಗೆ ಯಾವುದೇ ಕ್ಷಣದಲ್ಲಿ ಮೈತ್ರಿ ಪಕ್ಷಗಳು ಮುನಿಸಿಕೊಳ್ಳುವ ಸಾಧ್ಯತೆಯಿರುವುದರಿಂದ, ಈ ಎಲ್ಲವನ್ನೂ ನಿಭಾಯಿಸುವ ‘ಸಮರ್ಥ’ ವ್ಯಕ್ತಿ ಅಗತ್ಯವೆಂದು ಆರ್‌ಎಸ್‌ಎಸ್ ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಹಿಂದೆ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದಾಗ ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಜಯ್ ಜೋಶಿ ನಡುವೆ ಶೀತಲ ಸಮರ ಆರಂಭಗೊಂಡು, ಒಬ್ಬರ ಮುಖ ಒಬ್ಬರು ನೋಡಿಕೊಳ್ಳದ ಸ್ಥಿತಿ ನಿರ್ಮಾಣವಾಗಿತ್ತು. 2012ರಲ್ಲಿ ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜೋಶಿ ಅವರನ್ನು ಹೊರಗಿಡುವ ತನಕ ತಾವು ಸಭೆಯಲ್ಲಿ ಭಾಗವಹಿಸುವುದಿಲ್ಲವೆಂದು ಮೋದಿ ಒತ್ತಡ ಹೇರಿದ್ದರು. ದಶಕದ ಬಳಿಕವೂ, ಈ ಇಬ್ಬರ ನಡುವಿನ ಸಂಬಂಧ ವೃದ್ಧಿಸಿಲ್ಲ. ಆದರೀಗ ಆರ್‌ಎಸ್‌ಎಸ್‌ನ ಈ ತೀರ್ಮಾನವನ್ನು ಯಾವ ರೀತಿಯಲ್ಲಿ ಪ್ರಧಾನಿ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.