ಪುತ್ತೂರು : ಸುಳ್ಯ ಪುತ್ತೂರಿನ ಹಲವು ಗ್ರಾಮಗಳಿಗೆ ಹೆಜ್ಜೆ ಹಾಕುತ್ತಾ ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿನ ತೋಟದಲ್ಲಿ ಕಾಡಾನೆ ಕಂಡು ಬಂದಿದ್ದು, ಆದರೇ ಇದೀಗ ಎರಡು ಆನೆಗಳಿರುವುದಾಗಿ ತಿಳಿದು ಬಂದಿದೆ.
ಜೂ.10 ರಂದು ವೀರಮಂಗಲದಿಂದ ಶಾಂತಿಗೋಡಿಗೆ ಲಗ್ಗೆ ಇಟ್ಟ ಆನೆ ಹೊಳೆ ಬದಿಯಿಂದಲೇ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ತಲುಪಿ ಸದ್ಯ ಕೊಡಿಮರದಲ್ಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತೋಟದಲ್ಲಿ ಎರಡು ಆನೆಗಳು ಒಟ್ಟಾಗಿ ಇರುವುದು ಕಂಡು ಬಂದಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ.
ಗ್ರಾಮದಿಂದ ಗ್ರಾಮಕ್ಕೆ ಗಜರಾಜನ ನಡಿಗೆ
ಜೂ.5 ರಂದು ಸವಣೂರು ಗ್ರಾಮದಿಂದ ರಾತ್ರೋ ರಾತ್ರಿ ಆನೆ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕಾಣಿಸಿಕೊಂಡಿತು. ಅಲ್ಲಿಯೂ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿ ಹಗಲು ಹೊತ್ತು ಮಲಗಿದ್ದ ಆನೆಯನ್ನು ಅರಣ್ಯ ಇಲಾಖೆಯವರು ರಾತ್ರೋ ರಾತ್ರಿ ಹರಸಾಹಸಪಟ್ಟು ಬಂದ ದಾರಿಯಲ್ಲೇ ಮತ್ತೆ ಹಿಂದಿರುಗುವಂತೆ ಮಾಡಿದ್ದರು. ಹೀಗೆ ಹೋದ ಒಂಟಿಸಲಗ ಮತ್ತೆ ಸವಣೂರು ಗ್ರಾಮದ ಪುಣ್ಚಪ್ಪಾಡಿಗೆ ತೆರಳಿತ್ತು. ಆಹಾರಕ್ಕಾಗಿ ಅಲ್ಲಿನ ಒಂದಿಬ್ಬರು ಕೃಷಿಯನ್ನು ನಾಶ ಮಾಡಿತ್ತು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಕಾಲಿಟ್ಟ ಗಜರಾಜ ಅಲ್ಲಿಯೂ ಒಂದು ರಾತ್ರಿ ಕಳೆದಿತ್ತು. ಅಲ್ಲಿಂದ ಪ್ರಯಾಣ ಬೆಳೆಸಿದ ಆನೆ ಜೂ.10 ಕ್ಕೆ ಶಾಂತಿಗೋಡು ಗ್ರಾಮಕ್ಕೆ ತಲುಪಿದೆ. ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೆ ಬಂದಿರುವ ಆನೆ ಒಂದು ರಾತ್ರಿ ಅಲ್ಲಿ ಕಳೆದಿದೆ. ಅಲ್ಲಿಂದ ಜೂ.11 ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ.ಆ ನಂತರದ ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ಒಂದಲ್ಲ ಏರಡು ಆನೆಗಳು ಕಂಡು ಬಂದಿದ್ದು ಅರಣ್ಯ ಇಲಾಖೆಗೆ ಅಚ್ಚರಿ ಮೂಡಿಸಿದೆ.ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.