ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಸಚಿವರು ಜೂನ್ 9 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಈ ಪ್ರಮಾಣ ವಚನದ ವೇಳೆ ಕಾಣಿಸಿಕೊಂಡ ಚಿರತೆ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಬಿಜೆಪಿಯ ದುರ್ಗಾ ದಾಸ್ ಉಯಿಕೆ ಅವರು ಕೇಂದ್ರ ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ, ವೇದಿಕೆಯ ಹಿಂಬದಿಯಲ್ಲಿ ಪ್ರಾಣಿಯೊಂದು ಓಡಾಡಿತ್ತು ಆದರೆ ಹೆಚ್ಚಿನವರು ಇದನ್ನು ಆಗ ಗಮನಿಸಿರಲಿಲ್ಲ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ವಿಡಿಯೊದಲ್ಲಿ ಗುರುತಿಸಿದ ನೆಟ್ಟಿಗರು ಚಿರತೆ ಎಂದು ಕರೆದಿದ್ದರು. ಹೀಗಾಗಿ ಈ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು.
ರಾಷ್ಟ್ರಪತಿ ಭವನದಲ್ಲಿ ನಿಗೂಢ ಪ್ರಾಣಿಯೊಂದು ಅಡ್ಡಾಡುತ್ತಿರುವುದು ಕಂಡು ಬಂದಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಚಿರತೆ ಎಂದು ಕರೆದಿದ್ದರು.
ಭಾರತದ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಹಜವಾಗಿ ಬಿಗಿ ಭದ್ರತೆಯ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಮುಖಂಡರು, ರಾಜಕೀಯ ನಾಯಕರು, ಉದ್ಯಮಿಗಳು, ಪ್ರಮುಖ ಚಲನಚಿತ್ರ ನಟರು ಸಾಕ್ಷಿಗಳಾಗಿದ್ದರು. ಇಷ್ಟೆಲ್ಲ ಭದ್ರತೆ ನಡುವೆಯೂ ಚಿರತೆ ಕಾಣಿಸಿಕೊಂಡಿದೆ ಎಂಬ ವಿಚಾರವೇ ಅನೇಕರಲ್ಲಿ ಭಯ ಹುಟ್ಟಿಸಿತ್ತು.
ದೆಹಲಿ ಪೊಲೀಸರ ಸ್ಪಷ್ಟನೆ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ದೆಹಲಿ ಪೊಲೀಸರು, ʼʼರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಸೆರೆಯಾದ ಪ್ರಾಣಿಯ ಚಿತ್ರವನ್ನು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ‘ಚಿರತೆ’ ಎಂದು ಕರೆದಿವೆ. ಆದರೆ ಇದು ನಿಜವಲ್ಲ ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯ ‘ಮನೆಯ ಬೆಕ್ಕು’. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ಕಿವಿಗೋಡಬೇಡಿ’ ಎಂದು ಬರೆದುಕೊಂಡಿದ್ದು ಚಿರತೆ ವದಂತಿಗಳಿಗೆ ತೆರೆ ಎಳೆದಿದ್ದಾರೆ.