ಮಂಗಳೂರು: ಮಂಗಳೂರಿನ ಉಳ್ಳಾಲ ಕಡಲತೀರದಲ್ಲಿ ಸಮುದ್ರಪಾಲಾಗುತ್ತಿದ್ದ ಮೂವರು ಮಹಿಳೆಯರ ರಕ್ಷಣೆ ಮಾಡಲಾಗಿದ್ದು, ಓರ್ವ ಮಹಿಳೆ ನೀರುಪಾಲಾಗಿದ್ದಾರೆ. ಪಿ.ಎಲ್ ಪ್ರಸನ್ನ ಎಂಬುವರ ಪತ್ನಿ ಪರಿಮೀ ರತ್ನ ಕುಮಾರಿ (57) ನೀರುಪಾಲಾದವರು.
ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿಗಳು ಎಂದು ತಿಳಿದು ಬಂದಿದೆ. ಪರಿಮೀ ರತ್ನ ಕುಮಾರಿ ಹಾಗೂ ಅವರ ಸ್ನೇಹಿತರು ಪ್ರವಾಸಕ್ಕೆಂದು ಆಂಧ್ರಪ್ರದೇಶದಿಂದ ಬಂದಿದ್ದರು. ಸಮುದ್ರಕ್ಕಿಳಿದಾಗ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದಾಗ ನಾಲ್ವರು ಮಹಿಳೆಯರನ್ನು ಎಳೆದುಹೋಗಿದೆ.
ಕೂಡಲೇ ಎಚ್ಚೆತ್ತ ಸ್ಥಳೀಯರು ಕೊಚ್ಚಿ ಹೋಗುತ್ತಿದ್ದವರನ್ನು ತಕ್ಷಣ ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಈ ಪೈಕಿ ಪರಿಮೀ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಹೈದರಾಬಾದ್‌ನಿಂದ 5 ಮಂದಿ ಮಹಿಳೆಯರ ತಂಡ ಜೂ.6 ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಅಲ್ಲಿ ಪ್ರವಾಸ ಮುಗಿಸಿ ಇನೋವಾ ಕಾರಿನ ಮೂಲಕ ಜೂ.7 ಕ್ಕೆ ಕೊಡಗಿಗೆ ತಲುಪಿತ್ತು. ಅಲ್ಲಿಂದ ಜೂ.9 ಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ನಡೆಸಿ, ನಿನ್ನೆ ಸೋಮವಾರವಷ್ಟೇ ಧರ್ಮಸ್ಥಳ ಸಂದರ್ಶನ ನಡೆಸಿದ್ದರು. ಉಳ್ಳಾಲ ಸಮುದ್ರ ತೀರ ವಿಹಾರಕ್ಕೆ ಬಂದಾಗ ಈ ದುರ್ಘಟನೆ ನಡೆದಿದೆ.