ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿದ ಹರ್‌ದೀಪ್ ಸಿಂಗ್ ಪುರಿ ಗುಡ್‌ನ್ಯೂಸ್ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಇಳಕೆಯಾಗಲಿದೆ.
ʼʼಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು 2020ರಲ್ಲಿಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ರಾಜ್ಯಗಳ ಒಪ್ಪಿಗೆ ಅಗತ್ಯ. ಆದರೆ ರಾಜ್ಯಗಳಿಗೆ ಪ್ರಮುಖ ಆದಾಯ ಬರುವುದು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರಲಾಗಿರುವ ತೆರಿಗೆಯಿಂದ. ಹೀಗಾಗಿ ಇದು ಜಾರಿ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗುವುದುʼʼ ಅವರು ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಈ ಹಿಂದೆ ಮಾತನಾಡಿದ್ದ ಹರ್‌ದೀಪ್ ಸಿಂಗ್ ಪುರಿ, “ರಾಜ್ಯಗಳು ಈ ಬಗ್ಗೆ ಕ್ರಮ ಕೈಗೊಂಡರೆ, ಜಾರಿಗೊಳಿಸಲು ನಾವು ಸಿದ್ಧರಿದ್ದೇವೆ. ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎನ್ನುವುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು” ಎಂದು ಹೇಳಿದ್ದರು. 2022ರಲ್ಲಿಯೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿದ್ದ ಹರ್‌ದೀಪ್ ಸಿಂಗ್ ಪುರಿ ಈ ಬಗ್ಗೆ ತಿಳಿಸಿದ್ದರು. ಅಲ್ಲದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಈ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. 2023ರ ನವೆಂಬರ್‌ನಲ್ಲಿ ಅವರು, ಈ ಯೋಜನೆ ಜಾರಿಗೆ ತರುವುದರಿಂದ ಜನರಿಗೆ ಪ್ರಯೋಜನವಾಗಲಿದೆ ಎಂದು ಒತ್ತಿ ಹೇಳಿದ್ದರು.
ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ಇಂಧನ ಉತ್ಪನ್ನಗಳನ್ನು ಹೊಸ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಪ್ರಸ್ತುತ ಜಿಎಸ್‌ಟಿ ವ್ಯಾಪ್ತಿಗೆ ಒಳಪಡದ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಮತ್ತು ವಾಯುಯಾನ ಟರ್ಬೈನ್ ಇಂಧನದಂತಹ ಉತ್ಪನ್ನಗಳು ಮೌಲ್ಯವರ್ಧಿತ ತೆರಿಗೆ (VAT), ಕೇಂದ್ರ ಅಬಕಾರಿ ಸುಂಕ ಮತ್ತು ಕೇಂದ್ರ ಮಾರಾಟ ತೆರಿಗೆಯ ಅಡಿಯಲ್ಲಿ ಬರುತ್ತದೆ. ಪ್ರತಿ ರಾಜ್ಯವು ಪೆಟ್ರೋಲ್ ಮತ್ತು ಡೀಸೆಲ್‌ಗೆ ತನ್ನದೇ ಆದ ದರಗಳನ್ನು ನಿಗದಿಪಡಿಸುತ್ತದೆ. ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್‌ಟಿ ಕೆಳಗೆ ತಂದುಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬರುತ್ತಿರುವ ಆದಾಯ ಶೇ. 50ರಷ್ಟು ಕುಸಿದು ಹೋಗುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಮತ್ತು ರಾಜ್ಯ ಸರ್ಕಾರವು ಮೌಲ್ಯವರ್ಧಿತ ತೆರಿಗೆಯನ್ನು ಸಂಗ್ರಹಿಸುತ್ತದೆ.