ಚಿತ್ರದುರ್ಗ : ಯಾವುದೇ ವಿವೇಚನೆ ಇಲ್ಲದೇ, ಬೇಕಾಬಿಟ್ಟಿಯಾಗಿ ಗ್ಯಾರಂಟಿಗಳನ್ನು ಘೋಷಿಸಿದ ಪರಿಣಾಮ ಸರ್ಕಾರದ ಬೊಕ್ಕಸ ಬರಿದಾಗಿದೆ. ಇದರಿಂದಾಗಿ, ಕಳೆದ ಒಂದು ವರ್ಷದಲ್ಲಿ ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿದೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ” ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಜೂರಿಯಾಗಿದ್ದ ಕಾಮಗಾರಿಗಳು ಕುಂಠಿತಗೊಂಡಿದೆ. ಅನುದಾನ ಇಲ್ಲವೆಂದು ಹಲವು ಕಾಂಗ್ರೆಸ್ ಶಾಸಕರು ಬಂಡಾಯ ಎದ್ದಿದ್ದಾರೆ. ನಲವತ್ತಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಡಲೂ ಮುಂದಾಗಿದ್ದಾರೆ ” ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ಮುದ್ದೇಬಿಹಾಳ ಶಾಸಕ ನಾಡಗೌಡ್ರು ಯಾವ ಪುರುಷಾರ್ಥಕ್ಕಾಗಿ ನಾವು ಶಾಸಕರಾಗಿ ಮುಂದುವರಿಯಬೇಕು, ರಾಜೀನಾಮೆ ಕೊಡುತ್ತೇನೆ ಎಂದು ಪ್ರೆಸ್ ಮೀಟ್ ಮಾಡಿ ಹೇಳಿದ್ದಾರೆ. ಅದೇ ರೀತಿ, 40ಕ್ಕೂ ಹೆಚ್ಚು ಶಾಸಕರು ಅಭಿವೃದ್ದಿಗೆ ಹಣ ಸಿಗುತ್ತಿಲ್ಲ ಎಂದು ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದಾರೆ ಎಂದು ಸಂಸದ ಕಾರಜೋಳ ಬಾಂಬ್ ಸಿಡಿಸಿದ್ದಾರೆ.
ಗ್ಯಾರಂಟಿ ಯೋಜನೆ ಮುಂದುವರಿಸುವ ವಿಚಾರದಲ್ಲಿ ಕಾಂಗ್ರೆಸ್ಸಿನಲ್ಲೇ ಗೊಂದಲವಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ನಿರೀಕ್ಷಿತ ರೀತಿಯಲ್ಲಿ ಬರದ ಹಿನ್ನಲೆಯಲ್ಲಿ ಗ್ಯಾರಂಟಿ ನಿಲ್ಲಿಸಬೇಕು ಎಂದು ಬಹಿರಂಗವಾಗಿಯೇ ಕೆಲವು ಕಾಂಗ್ರೆಸ್ ಶಾಸಕರು ಹೇಳಿದ್ದರು.