ಪಟನಾ: ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳವಾರ ಉತ್ತರ ಪ್ರದೇಶದ ವಾರಾಣಾಸಿಗೆ ತೆರಳಿದ್ದ ಅವರು ಬುಧವಾರ ಬಿಹಾರ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಬಿಹಾರಕ್ಕೆ ಆಗಮಿಸಿದ ಅವರು ರಾಜಗೀರ್‌ನಲ್ಲಿ ನಳಂದಾ ವಿಶ್ವವಿದ್ಯಾನಿಲಯ ದ ಹೊಸ ಕ್ಯಾಂಪಸ್ ಉದ್ಘಾಟಿಸಿದರು.
”ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳಲ್ಲೇ ನಳಂದಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲು ಸಾಧ್ಯವಾಗಿದ್ದು ಸಂತಸ ತಂದಿದೆ. ಭಾರತದ ಅಭಿವೃದ್ಧಿಯ ಪಯಣದಲ್ಲಿ ಇದು ಶುಭ ಶಕುನವೆಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ನಳಂದಾ ಪ್ರಾಚೀನ ವಿಶ್ವವಿದ್ಯಾಲಯದ ಸ್ಥಳದಲ್ಲಿಯೇ ಅಭಿವೃದ್ಧಿಪಡಿಸಲಾದ ಈ ಕೇಂದ್ರೀಯ ವಿಶ್ವವಿದ್ಯಾಲಯವು 40 ತರಗತಿ ಕೊಠಡಿಗಳು ಮತ್ತು ಸುಮಾರು 1,900 ಆಸನ ಸಾಮರ್ಥ್ಯವನ್ನು ಹೊಂದಿರುವ ಎರಡು ಶೈಕ್ಷಣಿಕ ಬ್ಲಾಕ್‌ಗಳನ್ನು ಹೊಂದಿದೆ. ಜತೆಗೆ ಇಲ್ಲಿ ಸುಮಾರು 550 ಸೀಟು ಸಾಮರ್ಥ್ಯದ ಎರಡು ಸಭಾಂಗಣಗಳು ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್ ಕೂಡ ಇದೆ. 455 ಎಕ್ರೆಯಲ್ಲಿ ವ್ಯಾಪಿಸಿರುವ ಕ್ಯಾಂಪಸ್‌ನಲ್ಲಿ ಅಂತಾರಾಷ್ಟ್ರೀಯ ಕೇಂದ್ರ, ಆಂಫಿಥಿಯೇಟರ್, ಫ್ಯಾಕಲ್ಟಿ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣವಿದೆ. ನಳಂದ ವಿಶ್ವವಿದ್ಯಾಲಯದ ಈ ‘ನೆಟ್ ಝೀರೋ’ ಹಸಿರು ಕ್ಯಾಂಪಸ್ ಸೌರಶಕ್ತಿ, ಕುಡಿಯುವ ನೀರು ಸಂಸ್ಕರಣಾ ಘಟಕ, ನೀರಿನ ಮರುಬಳಕೆ ಘಟಕಗಳನ್ನು ಹೊಂದಿದೆ. ಜತೆಗೆ ಇಲ್ಲಿ ಹಲವು ಜಲಮೂಲಗಳೂ ಇವೆ.
ʼʼನಳಂದಾ ಒಂದು ಗುರುತು, ಗೌರವ, ಮೌಲ್ಯ. ಬೆಂಕಿಯು ಪುಸ್ತಕಗಳನ್ನು ಸುಟ್ಟು ಹಾಕಬಹುದು. ಆದರೆ ಜ್ಞಾನವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ. ಈ ಕ್ಯಾಂಪಸ್ ಬಿಹಾರಕ್ಕೆ ಸ್ಫೂರ್ತಿಯಾಗಿದ್ದು, ತನ್ನ ಗತ ವೈಭವವನ್ನು ಮರಳಿ ಪಡೆಯುವ ಹಾದಿಯಲ್ಲಿ ಮುಂದುವರಿಯುತ್ತಿದೆ. ಈ ಹೊಸ ಕ್ಯಾಂಪಸ್ ಭಾರತದ ಸಾಮರ್ಥ್ಯವನ್ನು ಜಗತ್ತಿಗೇ ಸಾರಿದೆ” ಎಂದು ಮೋದಿ ಹೇಳಿದರು.
ನಳಂದಾ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಮೋದಿ, ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬೆಂಬಲ ನೀಡಿದ ನೆರೆಯ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದರು. “ನಳಂದಾ ಭಾರತದ ಪರಂಪರೆ ಮಾತ್ರವಲ್ಲ, ಏಷ್ಯಾ ಮತ್ತು ವಿಶ್ವದ ಸಾಮೂಹಿಕ ಪರಂಪರೆಯ ಪುನರುಜ್ಜೀವನವಾಗಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನೆಗೆ ಅನೇಕ ರಾಷ್ಟ್ರಗಳು ನೆರವು ನೀಡಿದ್ದಾರೆʼʼ ಎಂದು ನೆನಪಿಸಿಕೊಂಡರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಪುನರುಚ್ಚರಿಸಿದ ಅವರು, “ಭಾರತವನ್ನು ಶಿಕ್ಷಣದ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಮಾತವಲ್ಲ ವಿಶ್ವದ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸುವುದು ನನ್ನ ಧ್ಯೇಯʼʼ ಎಂದು ಹೇಳಿದರು.
ನಳಂದಾ ವಿಶ್ವವಿದ್ಯಾಲಯವನ್ನು 2010ರಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪಿಸಲಾಗಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಕರೆಯಲ್ಪಡುತ್ತದೆ. ಭಾರತದ ರಾಷ್ಟ್ರಪತಿ ಈ ವಿಶ್ವವಿದ್ಯಾಲಯದ ಸಂದರ್ಶಕರಾಗಿರುತ್ತಾರೆ. ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿದ್ದರು. ಪ್ರಸ್ತುತ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರು ಕುಲಪತಿಯಾಗಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕೂಮಾರ್ ಕೂಡ ಉಪಸ್ಥಿತರಿದ್ದರು.