ಹೊಸದಿಲ್ಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನಾರೋಗ್ಯಕ್ಕೆ ಒಳಗಾಗಿರುವ 96 ವರ್ಷದ ಅಡ್ವಾಣಿ ಅವರನ್ನು ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಏಮ್ಸ್‌ನ ವೈದ್ಯರ ತಂಡ ನಿಗಾವಣೆಯಲ್ಲಿ ಇರಿಸಿಕೊಂಡಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯ ಹಳೆ ಖಾಸಗಿ ವಾರ್ಡ್‌ನಲ್ಲಿ ಅಡ್ವಾಣಿ ಅವರನ್ನು ದಾಖಲಿಸಲಾಗಿದೆ. ಯುರಾಲಜಿ ವಿಭಾಗದ ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರಲ್ಲಿ ಉಂಟಾಗಿರುವ ನಿರ್ದಿಷ್ಟ ಆರೋಗ್ಯ ಸಮಸ್ಯೆ ಏನು ಎನ್ನುವುದು ಸ್ಪಷ್ಟವಾಗಿಲ್ಲ.
ಎಲ್‌ಕೆ ಅಡ್ವಾಣಿ ಅವರ ಆರೋಗ್ಯದಲ್ಲಿ ಬುಧವಾರ ರಾತ್ರಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ದಿಲ್ಲಿಯ ಏಮ್ಸ್‌ಗೆ ಕರೆದೊಯ್ಯಲಾಗಿದೆ.
“ಎಲ್‌ಕೆ ಅಡ್ವಾಣಿ ಅವರನ್ನು ಏಮ್ಸ್ ಹೊಸದಿಲ್ಲಿಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ನಿಗಾವಣೆಯಲ್ಲಿ ಇದ್ದಾರೆ” ಎಂದು ಏಮ್ಸ್ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ. ವಯೋಸಹಜ ಅನಾರೋಗ್ಯ ಸಮಸ್ಯೆಗಳ ಕಾರಣದಿಂದ ಅವರನ್ನು ಪರಿಣತರ ವೈದ್ಯರು ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆಗೆ ಒಳಪಡಿಸಿದೆ.