ಕರ್ನಾಟಕ ಕರಾವಳಿ ಜನರ ಆಡುಭಾಷೆ ತುಳು ಕೋಟಿಗೂ ಹೆಚ್ಚು ಜನರು ಮಾತನಾಡುವ ತುಳು ಭಾಷೆಗೆ ನಮ್ಮನ್ನು ಆಳುವ ಸರ್ಕಾರಗಳು ಮಾನ್ಯತೆ ಕೊಟ್ಟಿಲ್ಲ. ಆದರೆ, ಜಾಗತಿಕವಾಗಿ ತುಳು ಭಾಷೆಗೆ ಗೂಗಲ್ ಸರ್ಚ್ ಇಂಜಿನ್ ಮಾನ್ಯತೆ ಕೊಟ್ಟಿದೆ. ಜಾಲತಾಣ ಬಳಕೆದಾರರು ಯಾವುದೇ ಪದಗಳ ಅರ್ಥ ತಿಳಿಯಲು ಗೂಗಲ್ ಟ್ರಾನ್ಸ್‌ಲೇಟರ್ ಬಳಸುವುದು ಸಾಮಾನ್ಯ.
ಅಂಥ ಗೂಗಲ್ ಟ್ರಾನ್ಸ್‌ಲೇಟರ್ ಸರ್ಚ್ ಇಂಜಿನ್‌ನಲ್ಲಿ ಕರ್ನಾಟಕ ಕರಾವಳಿ ಜನರ ಆಡುಭಾಷೆ ತುಳು ಸೇರ್ಪಡೆಯಾಗಿದೆ. ಇನ್ನು ಜಗತ್ತಿನ ಯಾವುದೇ ಮೂಲೆಯ ವ್ಯಕ್ತಿಯೂ ಮನಸ್ಸು ಮಾಡಿದರೆ ತುಳು ಭಾಷೆ ಕಲಿಯಲು ಸಾಧ್ಯ!
ಗೂಗಲ್ ಟ್ರಾನ್ಸ್‌ಲೇಟರ್ ಇಂಜಿನ್‌ಗೆ ಸೇರ್ಪಡೆ: ಜೂನ್ 27ರಂದು ಒಂದೇ ಬಾರಿಗೆ ಜಾಗತಿಕವಾಗಿ 110 ಭಾಷೆಗಳನ್ನು ಗೂಗಲ್ ಸಂಸ್ಥೆ ತನ್ನ ಟ್ರಾನ್ಸ್‌ಲೇಟರ್ ಇಂಜಿನ್‌ಗೆ ಸೇರ್ಪಡೆ ಮಾಡಿದ್ದು, ಇಂಗ್ಲಿಷ್ ಅಥವಾ ಯಾವುದೇ ಭಾಷೆಯ ಪದಗಳನ್ನು ಉಲ್ಲೇಖಿಸಿ ತುಳುವಿನಲ್ಲಿ ಅರ್ಥ ಕೇಳಿದರೆ ಅದಕ್ಕೀಗ ಸಂವಾದಿ ಅರ್ಥ ಕೊಡಬಲ್ಲ ಪದಗಳನ್ನು ತೋರಿಸುತ್ತದೆ.
ಭಾರತೀಯ ಭಾಷೆಗಳಾದ ತುಳು, ಮಾರ್ವಾಡಿ, ಸಂತಾಲಿ, ಖಾಸಿ, ಅವಧಿ ಇನ್ನಿತರ ಕೆಲವು ಭಾಷೆಗಳನ್ನು ಟ್ರಾನ್ಸ್‌ಲೇಟರ್ ಇಂಜಿನ್‌ಗೆ ಸೇರ್ಪಡೆ ಮಾಡಿವೆ. ಈ ಹಿಂದೆ 133 ಭಾಷೆಗಳು ಗೂಗಲ್ ಇಂಜಿನ್ನಲ್ಲಿದ್ದರೆ, ಹೆಚ್ಚುವರಿ 110 ಭಾಷೆಗಳ ಸೇರ್ಪಡೆಯೊಂದಿಗೆ 243 ಭಾಷೆಗಳು ಗೂಗಲ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ವಿಶೇಷ ಅಂದರೆ ಈಗ ಸೇರ್ಪಡೆಯಾಗಿರುವ ಭಾಷೆಗಳಲ್ಲಿ 25 ಪಸೆರ್ಂಟ್ ಆಫ್ರಿಕಾದ್ದೇ ಇವೆ ಎನ್ನುವುದು ಗೂಗಲ್ ಮಾಹಿತಿ.