ಕೊಡಗು ಜಿಲ್ಲಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರಮುಖ ತಾಣವಾಗಿರುವ ಮಡಿಕೇರಿ ತಾಲ್ಲೂಕಿನ ಉಡತ್ವಮೊಟ್ಟೆ ಹಾಗೂ ಕೆ ನಿಡುಗಣೆ ಗ್ರಾಮದಲ್ಲಿರುವ ಗ್ಲಾಸ್ ಬ್ರಿಡ್ಜ್ ಬಂದ್ ಮಾಡಲಾಗಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸೆಪ್ಟೆಂಬರ್ 15ರ ವರೆಗೆ ಗ್ಲಾಸ್ ಬ್ರಿಡ್ಜ್ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇನ್ನು ಕೊಡಗಿನಲ್ಲಿ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇದೀಗ ಕೊಡಗಿನಲ್ಲಿ ಹೊಸ ಟ್ರೆಂಡ್ ಕೂಡಾ ಶುರುವಾಗಿತ್ತು.ಪ್ರವಾಸಿಗರನ್ನು ಸೆಳೆಯಲು 2 ಪ್ರದೇಶಗಳಲ್ಲಿ ಗಾಜಿನ ಸೇತುವೆಗಳನ್ನೂ ನಿರ್ಮಿಸಲಾಗಿತ್ತು. ಕೆ ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸುಮಾರು 200 ಮೀಟರ್ ಉದ್ದದ ಗಾಜಿನ ಸೇತುವೆಯು ವಿಶಾಲವಾದ ಹಸಿರು ಮತ್ತು ಪರ್ವತಗಳ ಮಧ್ಯ ನಿರ್ಮಿಸಲಾಗಿದೆ.
ಈ ಗಾಜಿನ ಸೇತುವೆಯು ಪ್ರಧಾನ ಪ್ರವಾಸಿ ತಾಣವಾದ ಅಬ್ಬೆ ಜಲಪಾತದ ದಾರಿಯಲ್ಲಿದೆ.ಆದರೆ, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಈ ಗ್ಲಾಸ್ ಬ್ರಿಡ್ಜ್ ಅನ್ನು ಸೂಕ್ತ ಅನುಮತಿ ಇಲ್ಲದ ಕಾರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬಂದ್ ಮಾಡಿದೆ.
ಇನ್ನು ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಸೇತುವೆಯನ್ನು ನಿರ್ಮಿಸಲು ಖಾಸಗಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರೂ, ಸೇತುವೆಯ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಅದು ಈಗ ದುರ್ಬಲ ಸ್ಥಿತಿಯಲ್ಲಿದೆ.
ಜೌಗು ಪ್ರದೇಶದಲ್ಲಿರುವ ಈ ಗಾಜಿನ ಸೇತುವೆಯ ಕೆಳಗಿನ ಸಡಿಲವಾದ ಮಣ್ಣು ಕ್ರಮೇಣ ಕೆಳಕ್ಕೆ ಜಾರುತ್ತಿರುವುದರಿಂದ ಅಪಾಯದ ಸ್ಥಿತಿ ಎದುರಾಗಿದೆ.ಇದು ಅಧಿಕೃತ ಗಾಜಿನ ಸೇತುವೆಯಲ್ಲ. ಏಕೆಂದರೆ ಸಂಬಂಧಪಟ್ಟವರು ಯಾವುದೇ ಅಗತ್ಯ ಅನುಮತಿಯನ್ನು ಪಡೆದಿಲ್ಲ. ಈ ಸೇತುವೆಗೆ ಅರಣ್ಯ ಅನುಮತಿ ಇಲ್ಲ. ಸೇತುವೆಯನ್ನು ನಿರ್ಮಿಸುವ ಮುನ್ನ ಮಣ್ಣು ಪರೀಕ್ಷೆ ಸೇರಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಗ್ರಾಮ ಪಂಚಾಯಿತಿಯ ಏಕಮಾತ್ರ ನಿರ್ಣಯದ ಮೇರೆಗೆ ಸೇತುವೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಪ್ಟೆಂಬರ್ 15ರ ತನಕ ಬಂದ್ ಮಾಡಲಾಗುತ್ತಿದೆ ಎಂದು ಡಿಸಿ ವೆಂಕಟ್ ರಾಜ ಅವರು ತಿಳಿಸಿದ್ದಾರೆ.