ಪುಂಜಾಲಕಟ್ಟೆ: ಎಣ್ಮೂರು ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್ ನಾಪತ್ತೆ ಪ್ರಕರಣ, ಗಿರೀಶ್ ಮೃತ ದೇಹ ಪತ್ತೆಯಾಗಿದೆ
ಆಟೋ ರಿಕ್ಷಾ ಚಾಲಕರೋರ್ವರು ಬುಧವಾರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಗುರುವಾರ ಅವರ ರಿಕ್ಷಾವು ಅಡ್ಡೂರು-ಪೊಳಲಿ ಸೇತುವೆಯಲ್ಲಿ ಚಾಲನೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್ ಬಾಬು ಪೂಜಾರಿ ಅವರ ಪುತ್ರ ಗಿರೀಶ್ (37) ಕಾಣೆಯಾದವರು.
ಗಿರೀಶ್ ಎಣ್ಮೂರು ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿ ದೈವರಾಧನೆಯ ಸೇವೆ ಮಾಡುತ್ತಿದ್ದ ಸಾಧು ಸ್ವಭಾವದವರಾಗಿದ್ದರು. ಸುಖಿ ಸಂಸಾರದಲ್ಲಿ ಅವರಿಗೆ ಇಬ್ಬರು ಮಕ್ಕಳಿದ್ದರು.
ದೈವ ಚಾಕಿರಿಯ ಜೊತೆಗೆ ಜೀವನೋಪಾಯಕ್ಕಾಗಿ ಆಟೋ ಚಾಲನೆಯ ಕೆಲಸ ಮಾಡುತ್ತಿದ್ದ ಗಿರೀಶ್ ಬಜಪೆ ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಹೇಳಿ ತಡರಾತ್ರಿ ಎರಡು ಗಂಟೆಗೆ ರಿಕ್ಷಾದಲ್ಲಿ ಹೊರಟವರು ಬಳಿಕ ನಾಪತ್ತೆಯಾಗಿದ್ದರು.
ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಬಜಪೆ ಪೊಲೀಸರು ಅನುಮಾನಾಸ್ಪದ ವಾಗಿ ಚಾಲನೆಯಲ್ಲೇ ನಿಂತಿದ್ದ ರಿಕ್ಷಾವನ್ನು ಪರಿಶೀಲಿಸಿದರು. ಪರಿಸರದಲ್ಲಿ ಹುಡುಕಿದರೂ ಚಾಲಕನ ಪತ್ತೆಯಾಗಲಿಲ್ಲ, ಬಳಿಕ ರಿಕ್ಷಾದಲ್ಲಿ ದೊರೆತ ದಾಖಲೆ ಪತ್ರದ ಆಧಾರದಲ್ಲಿ ಅವರ ಮನೆಗೆ ಮಾಹಿತಿ ನೀಡಿದರು.
ಗುರುವಾರ ಬೆಳಗ್ಗಿನಿಂದ ಅಗ್ನಿ ಶಾಮಕ ದಳದ ಸಿಬಂದಿ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೊಳಲಿಯ ಫಲ್ಗುಣಿ ನದಿ ಸಹಿತ ವಿವಿಧೆಡೆ ಶೋಧ ನಡೆಸಿದರು ಸಂಜೆಯವರೆಗೂ ಗಿರೀಶ್ ಸುಳಿವು ಪತ್ತೆಯಾಗಿರಲಿಲ್ಲ.
ಇಂದು ಮತ್ತೆ ಕಾರ್ಯಾಚರಣೆ ಆರಂಭಿಸಿದ ಈಜುಗಾರರು ಜೊತೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ನದಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದೆ
ನಾಪತ್ತೆಯ ಬಗ್ಗೆ ಪತ್ನಿ ತಾರಾ ಗುರುವಾರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.