ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶ, ಗದ್ದೆ ಸಾಲುಗಳಿಗೆ ಭಾರೀ ಪ್ರಮಾಣದ ನೀರು ಹರಿದುಹೋಗುತ್ತಿದೆ. ಜನವಸತಿ ಪ್ರದೇಶಗಳತ್ತ ನೀರು ನುಗ್ಗಿ, ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ. ಸಗ್ರಿ, ಗುಂಡಿಬೈಲು, ಚಕ್ರತೀರ್ಥ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.
ಜತೆಗೆ ಬೈಲಕೆರೆ, ಕಲ್ಸಂಕ ಮಠದಬೆಟ್ಟು ಜಲಾವೃತಗೊಂಡಿದೆ. ಬೈಲಕೆರೆ ಸಮೀಪ ಮನೆಗಳಿಗೆ ನೀರು ನುಗ್ಗಿ ನೆರೆ ಸೃಷ್ಟಿಯಾಗಿತ್ತು. ಹೀಗಾಗಿ ಗುಂಡಿಬೈಲು ಸಮೀಪ ಐದಾರು ಕುಟುಂಬಗಳ ಸದಸ್ಯರನ್ನು ಅಗ್ನಿಶಾಮಕ ದಳದಿಂದ ರಕ್ಷಣೆ ಮಾಡಲಾಗಿದೆ. ಒಂದು ಮನೆಯ ಮೂವರನ್ನು ರಕ್ಷಣೆ ಮಾಡಿ, ಪಾಡಿಗಾರು ಸಮೀಪ ನಾಲ್ಕು ಮನೆಗಳ ಜನರನ್ನು ಎತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಿದ್ದಾರೆ. ಉಡುಪಿ ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿ ಸಂಪೂರ್ಣ ನೆರೆಯಾಗಿದೆ. ಉಡುಪಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಹುಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದು, ನಗರದ ಗುಂಡಿಬೈಲು ವಾಹನ ಸಂಚಾರ ದುಸ್ತರ ಪರಿಸ್ಥಿತಿಯಲ್ಲಿ ಇದೆ.
ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಸರ್ವಿಸ್ ರಸ್ತೆಯಲ್ಲಿ ನೀರು ನಿಂತು ದಿನವು ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಅಂಡರ್ ಪಾಸ್ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಸರ್ವಿಸ್ ರಸ್ತೆ ಬ್ಲಾಕ್ ಆಗಿದೆ ಎಂದು ಸ್ಥಳೀಯರು ಕಿಡಿಕಾರಿದರು. ಸ್ಥಳೀಯರ ದೂರಿನ ಹಿನ್ನೆಲೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪರಿಸ್ಥಿತಿ ಅವಲೋಕಿಸಿದರು. ತಕ್ಷಣ ಈ ಸಮಸ್ಯೆಗೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಸರ್ವಿಸ್ ರಸ್ತೆ ಪಕ್ಕದಲ್ಲಿರುವ ಚರಂಡಿ ವ್ಯವಸ್ಥೆ, ಸರಿ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂಸರಿಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಾಥ್ ನೀಡಿದರು.