ಚಂಡಿಗಢ: ದೇಶದಲ್ಲಿ ಖಲಿಸ್ತಾನಿ ಉಗ್ರರ ಹಾವಳಿ ಮತ್ತೆ ಆರಂಭವಾಗಿದೆ. ಚಂಡಿಗಢದ ನಾಲ್ವರು ಸಿಖ್ ಬಿಜೆಪಿ ನಾಯಕರಿಗೆ ಖಲಿಸ್ತಾನಿ ಉಗ್ರರಿಂದ ಕೊಲೆ ಜೀವ ಬೆದರಿಕೆಯ ಕರೆ ಬಂದಿದೆ. ಬಿಜೆಪಿಯೊಂದಿಗೆ ನಂಟು ಹೊಂದಿದ್ದಕ್ಕಾಗಿ ಖಲಿಸ್ತಾನಿ ಭಯೋತ್ಪಾದಕರಿಂದ ಕೊಲೆ ಬೆದರಿಕೆ ಬಂದಿದೆ ಎಂದು ಸಿಖ್ ನಾಯಕರು ತಿಳಿಸಿದ್ದಾರೆ.
ಚಂಡಿಗಢದಲ್ಲಿರುವ ಬಿಜೆಪಿ ಕಚೇರಿಗೆ ಕೊಲೆ ಬೆದರಿಕೆ ಪತ್ರವನ್ನು ಕಳುಹಿಸಲಾಗಿದ್ದು, ಅದರೊಂದಿಗೆ ಕೆಲವು ಸಂಶಯಾಸ್ಪದ ವಸ್ತುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಿಜೆಪಿ ಸಿಖ್ ನಾಯಕರು ಬಿಜೆಪಿ ತೊರೆಯಬೇಕು ಅಥವಾ ಸಾಯಲು ಸಿದ್ಧರಾಗಬೇಕು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಪತ್ರದಲ್ಲಿ ಖಲಿಸ್ತಾನ್ ಮತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಸಹ ಬರೆಯಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ, ಬಿಜೆಪಿ ಸಿಖ್ ಸಮನ್ವಯ ಸಮಿತಿ ಮತ್ತು ರಾಷ್ಟ್ರೀಯ ರೈಲ್ವೆ ಸಮಿತಿ ಸದಸ್ಯ ತೇಜಿಂದರ್ ಸಿಂಗ್ ಸರನ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರ್ಮಿಂದರ್ ಸಿಂಗ್ ಬ್ರಾರ್ ಅವರಿಗೆ ಬೆದರಿಕೆಗಳು ಬಂದಿವೆ. ಇದಲ್ಲದೆ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಅವರಿಗೂ ಬೆದರಿಕೆ ಹಾಕಲಾಗಿದೆ. ಬೆದರಿಕೆಗಳ ಬಗ್ಗೆ ಬಿಜೆಪಿ ನಾಯಕರು ಚಂಡಿಗಢ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಪಂಜಾಬ್ ಮತ್ತು ಚಂಡಿಗಢದ ಡಿಜಿಪಿ ಕೂಡ ಈ ಪ್ರಕರಣವನ್ನು ಪರಿಶೀಲಿಸಲಿದ್ದಾರೆ.
ಬಿಜೆಪಿ ನಾಯಕರಾದ ಪರ್ಮಿಂದರ್ ಸಿಂಗ್ ಬ್ರಾರ್ ಮತ್ತು ತೇಜಿಂದರ್ ಸರನ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. “ನೀವು ಸಿಖರು ಮತ್ತು ನೀವು ಸಿಖ್ ಪೇಟವನ್ನು ಧರಿಸುತ್ತೀರಿ ಎಂದು ನಾವು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಎಚ್ಚರಿಕೆ ನೀಡಿದ್ದೆವು. ನೀವು ಬಿಜೆಪಿ ಮತ್ತು ಆರ್‌ಎಸ್‌ಎಸ್ ಜತೆಗೂಡಿ ಸಿಖರು ಮತ್ತು ಪಂಜಾಬ್ ಜನರಿಗೆ ದ್ರೋಹ ಬಗೆದಿದ್ದೀರಿ. ನೀವುಆರ್‌ಎಸ್‌ಎಸ್‌ನೊಂದಿಗೆ ಸಿಖ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೀರಿ. ನೀವು ಬಿಜೆಪಿಯನ್ನು ತೊರೆಯಿರಿ ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆʼʼ ಎಂದು ಬೆದರಿಕೆ ಹಾಕಲಾಗಿದೆ.
“ನೀವು ಬಿಜೆಪಿಯೊಂದಿಗೆ ಸೇರಿ ರೈತರ ಚಳವಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದ್ದೀರಿ. ನೀವು ಸಿಖ್ ಧರ್ಮಕ್ಕೆ ದ್ರೋಹ ಎಸಗುತ್ತಿದ್ದೀರಿ. ನೀವು ಬಿಜೆಪಿ-ಆರ್‌ಎಸ್‌ಎಸ್ ಸಹಾಯದಿಂದ ಪಂಜಾಬ್ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ ಮತ್ತು ಬಿಜೆಪಿಗೆ ಸೇರುವಂತೆ ಜನರನ್ನು ಒತ್ತಾಯಿಸುತ್ತಿದ್ದೀರಿ. ಅಲ್ಲದೆ ನೀವು ಸಿಖರು ಮತ್ತು ಮುಸ್ಲಿಮರ ನಡುವಿನ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತೀರಿ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಮ್ಮನ್ನು ಬಳಸಿ ನಂತರ ಹೊರ ಹಾಕುತ್ತದೆ. ಸಿಖರು ಮತ್ತು ಪಂಜಾಬ್ ಅನ್ನು ನಾಶ ಮಾಡಲು ಅನೇಕರು ಬಂದರು ಮತ್ತು ಅವರನ್ನು ಓಡಿಸಲಾಯಿತು. ಸಿಖರಾಗಲೀ ಪಂಜಾಬ್ ಆಗಲಿ ನಾಶವಾಗಲಿಲ್ಲʼʼ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ರ ಇಲ್ಲಿಗೆ ಮುಗಿದಿಲ್ಲ. ಮುಂದುವರಿದು, “ಚಂಡಿಗಢದಲ್ಲಿ ಕುಳಿತು ಬಿಜೆಪಿ ನಾಯಕರು ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಮತ್ತು ನಾವು ಶೀಘ್ರದಲ್ಲೇ ಇದಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ಮಂಜಿಂದರ್ ಸಿರ್ಸಾ ಕೂಡ ಆರ್‌ಎಸ್‌ಎಸ್ ಭಾಷೆಯಲ್ಲಿ ಮಾತನಾಡುತ್ತಾರೆ. ನಾವು ಅವರಿಗೆ ಪಾಠ ಕಲಿಸುತ್ತೇವೆ. ನಾವು ಅವನನ್ನು ಎಂದಿಗೂ ಬಿಡುವುದಿಲ್ಲ. ನಾವು ಶೀಘ್ರದಲ್ಲೇ ದೆಹಲಿ ಡಿಎಸ್‌ಜಿಎಂಸಿಯ ಗುರುದ್ವಾರಗಳನ್ನು ಬಿಜೆಪಿಯಿಂದ ಮುಕ್ತಗೊಳಿಸುತ್ತೇವೆ. ನಿಮ್ಮಂತಹ ಅನೇಕ ದೇಶದ್ರೋಹಿಗಳು, ಬಿಜೆಪಿ ಸರ್ಕಾರದೊಂದಿಗೆ ಸೇರಿ ಕೆನಡಾ, ಪಾಕಿಸ್ತಾನ ಮತ್ತು ಭಾರತದಲ್ಲಿ ನಮ್ಮ ಸಹೋದರರನ್ನು ಕೊಂದಿದ್ದಾರೆ ಮತ್ತು ನಾವು ಸೇಡು ತೀರಿಸಿಕೊಳ್ಳುತ್ತೇವೆ” ಎಂದು ಬರೆಯಲಾಗಿದೆ.
ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಅವರಿಗೆ ಶೀಘ್ರದಲ್ಲೇ ಪಂಜಾಬ್ ತೊರೆಯುವಂತೆ ನಾವು ಎಚ್ಚರಿಕೆ ನೀಡುತ್ತೇವೆʼʼ ಎಂದಿರುವ ಪತ್ರದ ಕೊನೆಯಲ್ಲಿ ಪತ್ರದ ಕೊನೆಯಲ್ಲಿ ಖಲಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್, ಹರ್ದೀಪ್ ನಿಜ್ಜರ್ ಜಿಂದಾಬಾದ್, ಅವತಾರ್ ಸಿಂಗ್ ಖಾಂಡಾ ಜಿಂದಾಬಾದ್, ಪರಮ್ಜಿತ್ ಸಿಂಗ್ ಪಂಜ್ವಾಡ್ ಜಿಂದಾಬಾದ್, ಮೌಲಾನಾ ರಹೀಮ್ ಉಲ್ಲಾ ತಾರಿಕ್ ಜಿಂದಾಬಾದ್, ಪಿರ್ ಬಶೀರ್ ಅಹ್ಮದ್ ಜಿಂದಾಬಾದ್, ಮೌಲಾನಾ ಜಿಆರ್ ರೆಹಮಾನ್ ಜಿಂದಾಬಾದ್ ಮುಂತಾದ ಘೋಷಣೆಗಳನ್ನು ಬರೆಯಲಾಗಿದೆ.