ಪುತ್ತೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಕೆಡಿಪಿ ಅಭಿವೃದ್ದಿ ಸಭೆಯಲ್ಲಿ 4 ವರ್ಷದಿಂದ ಜಿಲ್ಲೆಗೆ ಒಂದೇ ಒಂದು ಮನೆ ಬರಲಿಲ್ಲ ಎಂದು ಪುತ್ತೂರು ಶಾಸಕರು ಪ್ರಸ್ತಾಪಿಸಿದ್ದು ಪತ್ರಿಕೆಯಲ್ಲಿ ಬಂದಿದೆ. 2022ರ ಫೆ.18ರಂದು ಆಗಿನ ಕರ್ನಾಟಕ ಸರಕಾರ 5ಲಕ್ಷ ಮನೆಗಳನ್ನು ಮಂಜೂರು ಮಾಡಿ ಮನೆ ಕೊಟ್ಟಿರುವುದು ಶಾಸಕರು ಅರಿತುಕೊಳ್ಳಬೇಕು. ಆದರೆ ಶಾಸಕರು ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಅದು ಸತ್ಯ ಎಂದು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಕಾಂಗ್ರೆಸ್ ಸರಕಾರದ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗಿದೆ. ಮೂಲಭೂತ ಸೌಲಭ್ಯಕ್ಕೆ ತಿಲಾಂಜಲಿ ನೀಡುವ ಕೆಲಸ ಮಾಡಿದೆ.ಸರಕಾರ ಮತ್ತು ಸರಕಾರ ನಡೆಸುವ ಮಂತ್ರಿಗಳು ಸರಕಾರದ ಪರವಾಗಿರುವ ಶಾಸಕರು ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಅದು ಸತ್ಯ ಎಂದು ಹೇಳುವ ಕೆಲಸ ಮಾಡುತ್ತಿದ್ದಾರೆ. ಶಾಸಕರು ಸುಳ್ಳು ಹೇಳಿದ್ದು ಸಾರ್ವಜನಿಕವಾಗಿ ಪತ್ರಿಕೆ ಮೂಲಕ ಕೊಟ್ಟಾಗ ಜನ ಅದನ್ನು ಸತ್ಯ ಎಂದು ನಂಬುತ್ತಾರೆ. ಜಿಲ್ಲೆಯಲ್ಲಿ ನಡೆದಿರುವ ಕೆಡಿಪಿ ಅಭಿವೃದ್ದಿ ಸಭೆಯಲ್ಲಿ 4 ವರ್ಷದಿಂದ ಜಿಲ್ಲೆಗೆ ಒಂದೇ ಒಂದು ಮನೆ ಬರಲಿಲ್ಲ ಎಂದು ಶಾಸಕರು ಪ್ರಸ್ತಾಪಿಸಿದ್ದು ಪತ್ರಿಕೆಯಲ್ಲಿ ಬಂದಿದೆ. 2022ರ ಫೆ. 18ರಂದು ಆಗಿನ ಕರ್ನಾಟಕ ಸರಕಾರ 5ಲಕ್ಷ ಮನೆಗಳನ್ನು ಘೋಷಣೆ ಮಾಡಿದೆ.
ಆ ಘೋಷಣಾ ಆದೇಶ 1ರಲ್ಲಿ 1ಲಕ್ಷ ಮನೆ, 2ನೇ ಆದೇಶದಲ್ಲಿ 4ಲಕ್ಷ ಮನೆ, ಆದೇಶ 3ರಲ್ಲಿ ಅನುಷ್ಠಾನಾಧಿಕಾರಿಗಳಿಗೆ ಅನುಷ್ಠಾನ ಮಾಡುವ ಆದೇಶವಿದೆ. ಅದರಲ್ಲಿರುವ ಮಾನದಂಡದಂತೆ 25 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಗ್ರಾ.ಪಂಗಳಿಗೆ 50 ಮನೆ, 15ಕ್ಕಿಂತ ಹೆಚ್ಚು 25ಕ್ಕಿಂತ ಕಡಿಮೆ ಸದಸ್ಯರಿದ್ದ ಗ್ರಾ.ಪಂಗಳಿಗೆ 40 ಮನೆ ಮಂಜೂರಾಗಿದ್ದು, ಉಪ್ಪಿನಂಗಡಿ ಗ್ರಾ.ಪಂ 50 ಮನೆಗಳನ್ನು, ಬನ್ನೂರು ಗ್ರಾ.ಪಂ 42 ಮನೆಗಳನ್ನು ನೀಡಿದೆ. ಕೆದಂಬಾಡಿ ಪಂಚಾಯತ್‌ನಲ್ಲ 35 ಮನೆ ಹಂಚುವ ಕೆಲಸವನ್ನು ಬೇಡಿಕೆಗೆ ಅನುಗುಣವಾಗಿ ಮಾಡಿದೆ.
ಆದರೆ ಪುತ್ತೂರು ಶಾಸಕರು ಯಾವುದೋ ಪ್ರಚಾರಕ್ಕಾಗಿ ಈ ರೀತಿಯಾಗಿ ಪತ್ರಿಕೆಯಲ್ಲಿ ಕೊಟ್ಟ ಪರಿಣಾಮ ಜನ ಇದನ್ನು ನಂಬುವ ಪರಿಸ್ಥಿತಿ ಬಂದಿದೆ. 4 ವರ್ಷದಿಂದ ಜಿಲ್ಲೆಗೆ ಒಂದೇ ಒಂದು ಮನೆ ಬಂದಿಲ್ಲ. ಇದರ ಸತ್ಯಾಸತ್ಯತೆ ಏನು ಎಂಬುದನ್ನು ಶಾಸಕರು ಹೇಳಬೇಕೆಂದು ಪ್ರಶ್ನಿಸಿದ ಅವರು ಈಗಿನ ಶಾಸಕರು ಒಂದೂವರೆ ವರ್ಷದಲ್ಲಿ ಎಷ್ಟು ಮನೆ ಹಂಚಿದ್ದಾರೆ ಹೇಳಲಿ. ಅದರ ಜೊತೆಗೆ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಮನವಿ ಮಾಡಿದ ಅವರು ಸರಕಾರ ಏನೆನು ಕಾರ್ಯಕ್ರಮ ಹಾಕಿಕೊಂಡಿದೆಯೋ ಅದರ ನೈಜ ಅಂಶವನ್ನು ಹೇಳಿ ಯಾವುದೋ ಸುಳ್ಳು ಹೇಳಿ ಈ ಹಿಂದಿನಿದನ್ನು ಮರೆ ಮಾಚುವ ಕೆಲಸ ಮಾಡುವುದು ಬೇಡ ಎಂದರು.
ಇವತ್ತು ಡೆಂಗ್ಯೂ ರಾಜ್ಯ ಮತ್ತು ಜಿಲ್ಲೆಯಲ್ಲಿ ವ್ಯಾಪಕವಾಗಿದೆ. ಕೋವಿಡ್ ರೀತಿಯಲ್ಲೇ ಹರಡುತ್ತಿದೆ. ಇಷ್ಟರ ತನಕ ಇಷ್ಟು ವ್ಯಾಪಕವಾಗಿ ಹರಡುತ್ತಿರಲಿಲ್ಲ ಪುತ್ತೂರಿನಲ್ಲೇ ಖಾಸಗಿ, ಸರಕಾರಿ ಆಸ್ಪತ್ರೆಯಲ್ಲಿ ಬಹಳಷ್ಟು ರೋಗಿಗಳಿದ್ದಾರೆ. ಸರಕಾರ ಗಾಡ ನಿದ್ರೆಯಲ್ಲಿದೆ. ಬಹುಶಃ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ ಹಾಗೆ ಕಾಣುತ್ತಿದೆ. ನಮ್ಮ ಉಸ್ತುವಾರಿ ಸಚಿವರು ಆರೋಗ್ಯ ಸಚಿವರಾಗಿದ್ದಾರೆ. ಆದರೆ ಆರೋಗ್ಯ ಸಚಿವರು ಜಿಲ್ಲೆಗೆ ಬಂದ ಮೇಲೆ ಆಸ್ಪತ್ರೆಗೆ ಭೇಟಿ ನೀಡುವುದು ಬಿಟ್ಟು ಡೆಂಗ್ಯೂ ಬಗ್ಗೆ ಸಭೆ ಮಾಡುವುದು ಬಿಟ್ಟು ರಾಜಕಾರಣದಲ್ಲೇ ತಳ್ಳಿನರಾಗಿದ್ದಾರೆ. ಸರಕಾರ ತಕ್ಷಣ ಡೆಂಗ್ಯೂ ಕುರಿತು ಮುಂಜಾಗ್ರತೆ ಕ್ರಮಕೈಗೊಳ್ಳಬೇಕು. ಆರೋಗ್ಯದ ಬಗ್ಗೆ ಗಮನ ಕೊಡಬೇಕೆಂದರು.