ಹೊಂದಾಣಿಕೆಯೆಂಬ ಪವಿತ್ರ ನಂಟು
“ಜಡೆ ಉದ್ದ ಜಡೆ ಮೊಟಕು ಎನುತ ನೀ ಗೊಣಗಿದರೆ ಬೋಳುತಲೆ ಬರಿ ನೋಟ ನಿನಗೊದಗಬಹುದು. ಅಂಗಳದ ಹೂ ಕಂಡು ಸಂತಸದಿ ಮೈ ಮರೆಯೋ! ತೃಪ್ತಿ ಭಾಗ್ಯದ ಹೊನಲು- ಮುದ್ದು ರಾಮ”. ಇಲ್ಲವುಗಳೆoಬ ಮೂಕ ಗೊಣಗುವಿಕೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದು ಸರ್ವಕ್ಕೂ ತೃಪ್ತಿದಾಯಕವೆಂಬುದು ಸರಳ ಅರ್ಥ. “ಹೊಂದಾಣಿಕೆ” ವರ್ಷ ಐದರಿಂದಲೇ ಹೊಂದಿಸಿಕೊಳ್ಳಬೇಕಾದ ಮಾನಸಿಕ ಮಂತ್ರ. ಇದು ಮನೆಯಲ್ಲಿರುವ ಸರ್ವರಲ್ಲೂ ಅಡಕವಾಗಿದ್ದರೆ “ಸ್ವರ್ಗಸುಖ”ವನ್ನು ಭ್ರಮೆಯಲ್ಲಿ ಅರಸಬೇಕಿಲ್ಲ, ನಮ್ಮೊಡನಿರುತ್ತದೆ. ಕಲಿಕೆಗೆ ತೊಡಗುವ ಮುದ್ದು ಪುಟಾಣಿಗಳಿಂದ ತೊಂಬತ್ತರ ಹಿರಿ ತಲೆಯವರೆಗೂ ಎಲ್ಲೆಂದರಲ್ಲಿ ಮಾಡಿಕೊಳ್ಳಲು ಸಾಧ್ಯವಿದ್ದರೆ ಈ ಜೀವನದಲ್ಲಿ ಬಾಧಕಗಳಿಲ್ಲದಂತೆ ಬದುಕಬಹುದು. ವಾಸ್ತವದಲ್ಲಿ ಈ ವಿಷಯದ ಕೊರತೆಯೇ ಸರ್ವ ಸಂಘರ್ಷಗಳಿಗೆ ಕಾರಣವೆಂಬುದು ಬೆತ್ತಲೆ ಸತ್ಯ. ನಮಗೆಲ್ಲ ಗೊತ್ತಿರುವ ವಾಸ್ತವಿಕ ಸಮಸ್ಯೆಯಾಗಿದ್ದರೂ, ಹಿರಿಯ-ಕಿರಿಯ, ಮೇಲು-ಕೀಳು, ಬಡವ- ಶ್ರೀಮಂತ, ಜಾಣ – ದಡ್ಡ, ಸಾಕ್ಷರ-ಅನಕ್ಷರ ಎಂಬವುಗಳ ನಡುವೆ ಬರುವ “ಅಹಂ ಮತ್ತು ಸ್ಥಿತಿಗಳು ” ತೊಡಕುಂಟು ಮಾಡುತ್ತಿದೆ. ಮನೆಯೊಳಗೆ ಅಪ್ಪ – ಮಕ್ಕಳು, ಶಾಲೆಯಲ್ಲಿ ಗುರು – ಶಿಷ್ಯ, ಸಮಾಜದಲ್ಲಿ ಆಳುವವರು – ಆಳುಗಳು, ಬಡವರು – ಧನಿಕರು, ವಿದ್ಯಾವಂತರು-ಅವಿದ್ಯಾವಂತರು, ಸ್ತ್ರೀ – ಪುರುಷರೆಂಬ ಸ್ಥಾನ ಮಾನ, ಬೇದ-ಭಾವ ಗಳ ಜೊತೆ ಸಾಗುತಿದೆ ಹೊರತಾಗಿ ಹೊಂದಾಣಿಕೆಯಿಂದ ಮೇಳೈಸುತ್ತಿದೆಯೇ? ಕೇಳಿದರೆ ಧನಾತ್ಮಕ ಉತ್ತರ ಬೆರಳೆಣಿಕೆಯಷ್ಟೇ. ಭಿನ್ನ ಸ್ಥಾನಿಕರ ನಡುವೆ ಹೊಂದಾಣಿಕೆ ಬಂದರೆ ತಮ್ಮ ಸ್ಥಾನ-ಮಾನಕ್ಕೆ ಕುಂದು ಬರುತ್ತದೋ ಎನ್ನೋ ಭಯ ಕಾಡುತಿದೆ ಸಾಮರ್ಥ್ಯವಂತರಿಗೆ. ಇದಂತೂ ವೇದಗಳ ಯುಗದಿಂದಲೂ ಬಿಡಿಸಲಾಗದ ಬಂಧ.ಅಲ್ಲಿ ಸಮಾಧಾನವಿತ್ತು, ಯಾಕೆಂದರೆ ಕೆಲಸ ನಿರ್ವಹಣೆಯ ಮೇಲೆ ವರ್ಣ, ಬಿಂಬಿತವಾಗಿತ್ತು. ” ಲೋಕದ ಡೊಂಕ ನೀವೇಕೆ ತಿದ್ದುವಿರಿ ” ಎಂಬುದಕ್ಕೆ ಮನ್ನಣೆಯಿತ್ತು, ಮನೆಯೊಳಗಿನ ಹೊಂದಾಣಿಕೆ ಯ ಬಗೆಗೆ ನಮ್ಮೆಲ್ಲರ ಅನುಭವಗಳ ಬಗ್ಗೆ ಯೋಚಿಸಿ. ಹೆಣ್ಣು ಅಕ್ಕನೋ, ಅಮ್ಮನೋ, ಅತ್ತೆಯೋ, ಅಜ್ಜಿಯೋ ಆಗುತ್ತಾಳೆ. ಅಂತೆಯೇ ಗಂಡು ಅಣ್ಣನೋ, ಅಪ್ಪನೋ,ಮಾವನೋ ಅಜ್ಜನೋ ಆಗುತ್ತಾನೆ. ಒಂದೇ ತಲೆಮಾರಿನಲ್ಲಿ ಸಂಬಂಧದ ವಿಭಿನ್ನ ವೇಷ ತೊಡುವ ಸ್ತ್ರೀ ಮತ್ತು ಪುರುಷ ಮನಸ್ಸುಗಳು ಸಮಾನವಾಗಿ ಇರುವುದಕ್ಕಿಲ್ಲ ಎಂಬುದು ಅವರವರ ವಯೋಮಾನಕ್ಕನುಗುಣವಾಗಿ ಅನುಭವವೇದ್ಯ. ಅಲ್ಲಿ ಮನಸ್ಸಿನ ಬದಲಾವಣೆಯಾಗಿಲ್ಲವೆಂದಾದರೆ ಅವನು ಯಾ ಅವಳು ಶ್ರೇಷ್ಠ ವ್ಯಕ್ತಿಗಳೆಂದೇ ಹೇಳಬಹುದು. ಸ್ವ- ಸಹೋದರತೆ ಅನ್ಯರಲ್ಲಿಯೂ , ಸ್ವಂತ ಮಕ್ಕಳ ಪ್ರೀತಿ ಇತರರೊಂದಿಗೂ , ಮಗಳ ಪ್ರೀತಿ ಸೊಸೆಯಲ್ಲಿ, ಮೊಮ್ಮಕ್ಕಳ ಮಮತೆ ಇತರರಲ್ಲಿ ಎಷ್ಟಾದರೂ ವಿರಳವೆ. ಮಾತಿಗೆ ಕೃತಕತೆ ಬರಬಹುದಷ್ಟೇ, ಆದರೆ ನೈಜತೆ ಅಸಾಧ್ಯ. ಆದರೂ ಪ್ರಸ್ತುತ ಅಲ್ಲೆಲ್ಲ “ಹೊಂದಾಣಿಕೆ” ಬಹಳಷ್ಟು ದೊಡ್ಡ ಪಾತ್ರ ವಹಿಸುತ್ತದೆ.ಯಾಕೆಂದರೆ ಜೀವಿಯು ಒಬ್ಬನೇ ಹುಟ್ಟಿ ಒಬ್ಬನೇ ಸಾಯುತ್ತಾನೆ. “ಉನ್ಮತ್ತ ಇವ ಸಜ್ಞೆಯೋ ನಾಸ್ತಿ ಕಶ್ಚಿದ್ದಿ ಕಸ್ಯಚಿತ್” ಎಂಬಂತೆ ಬೇರೆ ಊರಿಗೆ ಹೋಗುವವನು ಧರ್ಮಶಾಲೆಯಲ್ಲಿ ರಾತ್ರಿ ಉಳಿದುಕೊಂಡು ಮರುದಿನ ಆ ಧರ್ಮಶಾಲೆಯನ್ನು ಬಿಟ್ಟು ಹೋಗುವಂತೆಯೇ ತಂದೆ, ತಾಯಿ, ಹೆಂಡತಿ, ಮನೆ, ಸಂಪತ್ತು ಇದೆಲ್ಲ ತಂಗುದಾಣಗಳಷ್ಟೇ. ಹೇಳದೆ ಕೇಳದೆ ಕರೆ ಬಂದಾಗ ಹೋಗಬೇಕಾದವರೇ ಎಲ್ಲರೂ. ಈ ನಡುವೆ ಆಪ್ತರಾಗಿ ಬಾಳುವ ಹೊಂದಾಣಿಕೆ ಇಲ್ಲದಿದ್ದರೆ ಏನು ಫಲ. ಹೊಂದಾಣಿಕೆಯ ಕಲಿಕೆ ಅಲ್ಪ ಹಿರಿಯರಿಂದಲೂ ಉಳಿದದ್ದು ನಮ್ಮ ಮನಸ್ಸಿನಿಂದಲೇ ಆಗಬೇಕಾಗಿರುವುದು . ನಾವು ಮಾಡಿರುವುದನ್ನು ನಮ್ಮವರು ಕಲಿಯುತ್ತಾರಷ್ಟೇ… ಈ ಬಗ್ಗೆ ಪ್ರಸ್ತುತ ತಲೆಮಾರಿನಲ್ಲಿ ಸ್ವಲ್ಪದರ ಮಟ್ಟಿಗೆ ಹಿರಿಯರೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವುದು. ಯಾಕೆಂದರೆ ನಮ್ಮವರು, ಹಿಂದೆ ಹಾಗಿದ್ದರು- ಹೀಗಿದ್ದರು ಎನ್ನುವ ಅಂತೆ-ಕಂತೆಗಳನ್ನು ಕೇಳುವ ವ್ಯವಧಾನ ನಮ್ಮ ಮಕ್ಕಳಿಗಿಲ್ಲ. ಅವರ ವ್ಯವಸ್ಥೆಗೆ ನಾವು ಹೊಂದಿಕೊಳ್ಳಬೇಕಷ್ಟೆ. ಹಾಗಾದಾಗ ಮಾತ್ರ ನಾವು ನಮ್ಮ ಸ್ವಂತ ಮಕ್ಕಳೊಂದಿಗೆ ಬದುಕಬಹುದು, ಇಲ್ಲವಾದರೆ ಮುದುಕರು ಆಶ್ರಮದಲ್ಲೋ ಅಥವಾ ಎಲ್ಲಾದರೊಂದುಕಡೆ “ಮಕ್ಕಳು ನಮ್ಮನ್ನು ಬಿಟ್ಟು ಬಿಟ್ಟರು” ಎಂಬ ಕಥೆಯೊಂದಿಗೆ ಇರಬೇಕಾದೀತು. ನಾನಂದಂತೆ ಆಗಬೇಕು ಎಂಬ ಹಠವೂ ಕೆಲವೊಮ್ಮೆ ಅನರ್ಥಕ್ಕೇರುತ್ತದೆ. ಇಲ್ಲೆಲ್ಲ ನಾವೆಲ್ಲರೂ ಸ್ವಲ್ಪ ವಿಷಯದ ಮತ್ತು ವ್ಯಕ್ತಿಗಳ ನಡುವೆ ಹೊಂದಾಣಿಕೆಯ ಸೇತುವಾಗಿ ವರ್ತಿಸಬೇಕಾಗುತ್ತದೆ. ಕೆಲವೊಮ್ಮೆ ಈ ಆಂಗ್ಲ ಭಾಷೆಯ “ಅಡ್ಜಸ್ಟ್ಮೆಂಟ್ ” ಏನನ್ನೂ ಸಾದಿಸುತ್ತದೆ ಹಲವು ಬಾರಿ ಬಾಧಿಸುತ್ತದೆ. ಹೊಂದಾಣಿಕೆಯಿಲ್ಲದ ಬದುಕು ಕುಟುಂಬಕ್ಕೆ, ಸಮಾಜಕ್ಕೆ, ರಾಜ್ಯ, ದೇಶಕ್ಕೆ ಮಾರಕವೆ. ದೇಹದ ರಚನೆ ಯಲ್ಲಿ ಹೊಂದಾಣಿಕೆಯ ಪಾಠವಿದೆ. ನಾಲಿಗೆ ಆಶಿಸುವುದನ್ನು ಕೈ ನೀಡದಿದ್ದರೆ, ಕಾಲು ತರಲು ಹೊರಡದಿದ್ದರೆ, ಹೊಟ್ಟೆ ಬಯಸಿದ್ದನ್ನು ಬಾಯಿ ಕೊಡದಿದ್ದರೆ ದೇಹ ತಟಸ್ಥವಾಗಿ ಮಣ್ಣು ಸೇರಬಹುದು. ಬದುಕಿನಲ್ಲೂ ಅಷ್ಟೆ ವ್ಯತ್ಯಾಸಗಳನ್ನು ನುಂಗಿ ಹೊಂದಾಣಿಕೆಯ ಬದುಕಿಗಿರುವ ಬೆಲೆ ಅಹಂ- ಸ್ವಾರ್ಥ ಬದುಕಿಗಿಲ್ಲ. ಇದ್ದರೂ ಅದಕ್ಕೆ ಬಾಳ್ವೆ ಇಲ್ಲ. ನಾನೂ ಹೊಂದಾಣಿಕೆಗೆ ಪ್ರಯತ್ನಿಸುತ್ತೇನೆಂಬ ಯೋಚನೆಯೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇನೆ. ಅದಕ್ಕೇ ಹೇಳುತ್ತಿದ್ದೇನೆ “ಹೊಂದಾಣಿಕೆ” ಪವಿತ್ರ ಮಂತ್ರ ಇದು ಮನದೊಳಗೆ ಮೊಳಕೆಯೊಡೆದು ವಾಸ್ತವದಲ್ಲಿ ಬೆಳೆಯಬೇಕಾದುದು ಬೆಳೆಸೋಣವೇ?
*🖊️ರಾಧಾಕೃಷ್ಣ ಎರುಂಬು