ಮೈಸೂರು : ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಚಾಮುಂಡಿಬೆಟ್ಟದಲ್ಲಿನ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿತು. ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ಪೂಜೆಯಲ್ಲಿ ರಾಜವಂಶಸ್ಥ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದರು. ಸಂಸದರಾದ ಬಳಿಕ ಮೊದಲ ಸಲ ಪೂಜೆಯಲ್ಲಿ ಪಾಲ್ಗೊಂಡರು. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ಆಗಮಿಸುವ ಭಕ್ತರಿಗಾಗಿ ಲಲಿತಮಹಲ್ ಪ್ಯಾಲೇಸ್ ಬಳಿಯಿರುವ ಮೈದಾನದಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಕೇವಲ ಶುಕ್ರವಾರ ಮಾತ್ರ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಶನಿವಾರ, ಭಾನುವಾರ ಉಚಿತ ಬಸ್ ವ್ಯವಸ್ಥೆ ಇರುವುದಿಲ್ಲ. ಆಷಾಢ ಮಾಸದ ನಾಲ್ಕು ಶುಕ್ರವಾರ ಶನಿವಾರ ಭಾನುವಾರದಂದು ವಾಹನಗಳಿಗೆ ನಿಷೇಧವಿರುತ್ತದೆ. ಇಂದಿನಿಂದ ಜುಲೈ 14, 19, 21, 26, 28ರವರೆಗೆ ಮತ್ತು ಆಗಷ್ಟ 2ರಿಂದ 4ರವರೆಗೆ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಕ್ಕೆ ನಿರ್ಬಂಧಿಸಲಾಗಿದೆ.
ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಪಾಸ್ ವ್ಯವಸ್ಥೆ ರದ್ದು ಮಾಡಲಾಗಿದೆ. ಬೆಟ್ಟದಲ್ಲಿ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೇವೆ, ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಪ್ರಸಾದ ವಿತರಿಸುವುದಕ್ಕೆ ಕಡ್ಡಾಯವಾಗಿ ಜಿಲ್ಲಾಡಳಿತದಿಂದ ಅನುಮತಿ ಪತ್ರ ಪಡೆಯಬೇಕು. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧಿಸಲಾಗಿದೆ. ಜನರು ಸರತಿ ಸಾಲಿನಲ್ಲಿ ದೇಗುಲ ಪ್ರವೇಶಿಸಲು ಬ್ಯಾರಿಕೇಡ್ ಅಳವಡಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ.
ಲಲಿತಾ ಮಹಲ್ ಹೆಲಿಪ್ಯಾಡ್ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಮೈದಾನವು 2,000 ದ್ವಿಚಕ್ರ ವಾಹನಗಳು ಮತ್ತು ಸುಮಾರು 1,000 ನಾಲ್ಕು ಚಕ್ರದ ವಾಹನಗಳು ಮತ್ತು ಇತರ ಪ್ರಯಾಣಿಕ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಇಷ್ಟೇ ಅಲ್ಲದೆ ಫ್ಲೆಕ್ಸ್ ಬ್ಯಾನರ್‌ಗಳು, ಬೋರ್ಡ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳ ಪ್ರದರ್ಶನ ನಿಷೇಧಿಸಲಾಗಿದೆ. ಯಾವುದೇ ವಿಶೇಷ ಪಾಸ್‌ಗಳನ್ನು ನೀಡಲಾಗುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.