ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ಬಳಿಯ ಹೆದ್ದಾರಿ ಸಮಿಪ ಬೃಹತ್ ಗುಡ್ಡ ಕುಸಿದು ಬಿದ್ದು ಏಳು ಜನ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿ ಧಾವಿಸಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗುಡ್ಡ ಕುಸಿದು 7 ಜನ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಿಸಲು ಸೂಚನೆ ನೀಡಿದ್ದೇನೆ. ಎನ್ಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಎರಡು ಮೂರು ದಿನದಿಂದ ಎಡೆಬಿಡದೇ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾದ ಬಗ್ಗೆ ವರದಿಯಾಗಿದೆ.
ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಅಂಚಿನ ಟೀ ಸ್ಟಾಲ್ ಮತ್ತಿತರ ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಸಂಪೂರ್ಣ ಹಾನಿಯಾಗಿದೆ. ಘಟನೆಯಲ್ಲಿ ಹಲವರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಘಟನೆ ಸಂಪೂರ್ಣ ಮಾಹಿತಿ ತಿಳಿದು ಬರಬೇಕಾಗಿದೆ.
ಗುಡ್ಡ ಕುಸಿತ ರಭಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ, ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಟ್ಯಾಂಕರ್ ಅಲ್ಲದೆ ಇನ್ನಿತರೆ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ ಎಂದು ಅಂದಾಜಿಸಲಾಗಿದೆ. ಮಳೆಯ ಪರಿಣಾಮ ಒಮ್ಮೆಲೆ ಗುಡ್ಡ ಕುಸಿದು ಮಣ್ಣು ನದಿಯಲ್ಲಿ ಜೋರಾಗಿ ಜರಿದ ಪರಿಣಾಮ ಗಂಗಾವಳಿ ನದಿ ಪಾತ್ರದ ಎರಡು ದಡದ ಮನೆಯೂ ಕೊಚ್ಚಿಹೋಗಿದೆ ಎನ್ನಲಾಗಿದ್ದು, ಹೆದ್ದಾರಿ ಅಂಚಿಗಿರುವ ಟೀ ಸ್ಟಾಲ್ , ವಾಹನಗಳಲ್ಲಿ ಎಷ್ಟು ಜನರಿದ್ದರು? ಏನಾಗಿದೆ ? ಎಂಬುದರ ಬಗ್ಗೆ ಕೆಲ ಜೀವ ಹಾನಿಯಾದರೂ ಸಂಭವಿಸಿರಬಹುದು ಎನ್ನುತ್ತಾರೆ ಸ್ಥಳೀಯರು. ಅದರಂತೆ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಆರ್ ಬಿ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ ಈ ರೀತಿ ಗುಡ್ಡ ಕುಸಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಣ್ಣಿನಡಿ 9 ಜನ ಸಿಲುಕಿದ್ದಾರೆ. ಇದರಲ್ಲಿ ಒಂದೇ ಕಾರಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದವರು ಇದ್ದಾರೆ ಎನ್ನಲಾಗಿದೆ. ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ (37), ರೋಷನ್, ಆವಂತಿಕಾ, ಜಗನ್ನಾಥ ಸೇರಿದಂತೆ 9 ಮಂದಿ ಮಣ್ಣಿನಡಿ ಸಿಲುಕಿದ್ದಾರೆ. 9 ಜನರಲ್ಲಿ 7 ಮಂದಿ ಮೃಪಟ್ಟಿದ್ದಾರೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಪೊಲೀಸ್ ಅಗ್ನಿ ಶಾಮಕ, ಎನ್‌ಹೆಚ್ ಎಐ ಸುರಕ್ಷತಾ ಅಂಬುಲೆನ್ಸ್ ಮತ್ತಿತರ ಸ್ಥಳದಲ್ಲಿ ಬಿಡು ಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು, ಹೆದ್ದಾರಿ ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಂತಿವೆ. ಗುಡ್ಡ ಕುಸಿತದಿಂದ ಪ್ರಾಣ ಹಾನಿ ಮತ್ತಿತರ ಹಾನಿಯಾಗಿರುವ ಸಾಧ್ಯತೆ ಇದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ. ರಕ್ಷಣಾ ಕಾರ್ಯಕ್ಕೆ ಮಳೆಯ ಅಡಚಣೆಯೂ ಎದುರಾಗಿದ್ದು ರಸ್ತೆಯ ಮಣ್ಣು ಸರಿಸುವ ಜೊತಗೆ ಮಣ್ಣಿನಡಿ ಸಿಲುಕಿರುವವರ ರಕ್ಷಣೆಯು ಮುಖ್ಯವಾಗಿದೆ.